

ಮೈಸೂರು: ಪ್ರಸ್ತುತ ನಮ್ಮ ಸುತ್ತಲೂ ಕಾಣುವ ಅನ್ಯಾಯಕ್ಕೆ ಸಮಾಜವೇ ಕಾರಣ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಸಿಎಫ್‌ಟಿಆರ್‌ಐ ಸಭಾಂಗಣದಲ್ಲಿ ಮಂಗಳವಾರ ಸಿಎಫ್‌ಟಿಆರ್‌ಐ ಪ.ಜಾತಿ, ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸಿಎಫ್‌ಟಿಆರ್‌ಐ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟಾರಾಗಲು ಒಂದು ರೀತಿಯಲ್ಲಿ ಸಮಾಜವೇ ಕಾರಣ. ಚುನಾವಣೆಯಲ್ಲಿ ಆಸೆ, ಅಮೀಷಗಳಿಗೆ ಒಳಗಾದರೆ ರಾಜಕಾರಣಿಯನ್ನು ಪ್ರಶ್ನಿಸುವ ನೈತಿಕತೆ ಇರುವುದಿಲ್ಲ ಎಂದರು. ಹೀಗಾಗಿ ಪ್ರಸ್ತುತ ನಮ್ಮ ಸುತ್ತಲೂ ಕಾಣುವ ಸಾಮಾಜಿಕ ಅನ್ಯಾಕ್ಕೆ ಸಮಾಜವೇ ಕಾರಣವಾಗಿದೆ. ಜನರಲ್ಲಿ ಸಂಪತ್ತು ಮತ್ತು ಅಧಿಕಾರದ ಬಾಯಾರಿಕೆ ಹೆಚ್ಚಾಗಿದೆ. ಮಾನವೀಯ ಮೌಲ್ಯಗಳು ಕಡಿಮೆಯಾಗಿವೆ ಎಂದರು.
ಮಾನವೀಯ ಮೌಲ್ಯಗಳಿಂದ ಕೂಡಿದ ಜೀವನದಿಂದ ಮಾತ್ರ ಡಾ.ಬಿ.ಆರ್. ಅಂಬೇಡ್ಕರ್ ಕನಸಿನ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಅಂಬೇಡ್ಕರ್ ಸೇವಾ ಕಾರ್ಯ ಮತ್ತು ವಿಚಾರ ಧಾರೆಗಳನ್ನು ಎಲ್ಲರೂ ಸದಾ ಸ್ಮರಿಸುವುದರೊಂದಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಪಾಲಕರು ಮಕ್ಕಳಿಗೆ ನೈತಿಕ ಪಾಠಗಳನ್ನು ಕಲಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು, ನೈತಿಕ ಶಿಕ್ಷಣವನ್ನು ಹಿಂದೆ ಸಮಾಜದಿಂದ ಕಲಿಯುತ್ತಿದ್ದೆವು. ಹಿಂದೆ ಕಾನೂನು ರಚನೆ ಅಗದಿದ್ದರೆ ಸಮಾಜದ ಭಯ ಇತ್ತು. ಆದರೆ ಇಂದು ಕಾನೂನು, ನ್ಯಾಯಾಲಯ ಇದ್ದರೆ ಜನರಲ್ಲಿ ಭಯ ಇಲ್ಲ. ಅದರಿಂದ ಅಪರಾಧ ಕೃತ್ಯಗಳು, ಭ್ರಷ್ಟಾಚಾರಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸೀಮಿತ ಮಾಡಬೇಡಿ:
ರಾಜ್ಯ ಸರ್ಕಾರದ ಕೈ ಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತೆ ಕೆ.ಜ್ಯೋತಿ ಮಾತನಾಡಿ, ಜನರಲ್ಲಿ ಅಸಹನೆ, ಕೋಪದೊಂದಿಗೆ ಪ್ರತಿಸ್ಪರ್ಧೆ ಮನೋಭಾವ ಹೆಚ್ಚಾಗಿದೆ, ಹಣ ಸಂಪಾದನೆಯೇ ಯಶಸ್ಸು ಎಂಬಂತೆ ಆಗಿದೆ. ಅಂಬೇಡ್ಕರ್ ಅವರನ್ನು ದಲಿತರ ಸೂರ್ಯ ಎಂದು ಹೇಳುವ ಮೂಲಕ ಕೇವಲ ಒಂದು ಜಾತಿಗೆ ಸಿಮೀತಗೊಳಿಸಲಾಗಿದೆ. ಅವರು ಜಗತ್ತಿಗೆ ಬೆಳಕು ನೀಡಿದ ಸೂರ್ಯ, ಅವರನ್ನು ಯಾವುದೇ ಒಂದು ಜಾತಿಗೆ ಸಿಮೀತಗೊಳಿಸಬಾರದು ಎಂದು ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ದೇಶದ ಜನತೆ ನೆಮ್ಮದಿಯಿಂದ ಸುಭಿಕ್ಷವಾಗಿ ಬದುಕಲು ಅಂಬೇಡ್ಕರ್ ಅವರೇ ಕಾರಣವಾಗಿದ್ದಾರೆ. ಅವರು ನಮ್ಮ ಶಕ್ತಿಯಾಗಿದ್ದಾರೆ ಎಂದು ಹೇಳಿದರು.
ಸಾಹಿತಿ ಡಾ.ಸಿ.ನಾಗಣ್ಣ, ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ಸಿಎಫ್‌ಟಿರ್‌ಐ ಎಸ್ಸಿ, ಎಸ್ಟಿ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್.ಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಗಿರಿಧರ್ ಪರ್ವತಂ ಅಧ್ಯಕ್ಷತೆ ವಹಿಸಿದ್ದರು. ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಸ್ವಾಮಿ ಇದ್ದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.