

ಮೈಸೂರು: ಸನ್ಯಾಸಿಗಳು ಎಂದರೆ ಮನೆಯನ್ನು ತೊರೆದು ಕಾವಿ ಧರಿಸಿ ಆಧ್ಯಾತ್ಮಿಕ ಜಗತ್ತನ್ನು ಪ್ರವೇಶಿಸುವವರು ಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ, ನಮಗೆ ಬಂಧು ಬಳಗ ಇರುವ ರೀತಿಯಲ್ಲಿ ಸನ್ಯಾಸಿಗಳಿಗೆ ಸಮಾಜವೇ ಸಂಸಾರ. ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಸಮಾಜದ ಪ್ರತಿಯೊಬ್ಬರು ಬಂಧುಗಳು ಆಗಿದ್ದರು ಎಂದು ಕಲಾವಿದ ಪ್ರೊ.ಎಸ್. ಮಲ್ಲಣ್ಣ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಮಹಾವಿದ್ಯಾಪೀಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಶಿವಾನುಭವ ದಾಸೋಹ’ ಕಾರ್ಯಕ್ರಮದಲ್ಲಿ ‘ಶ್ರೀ ಶಿವಕುಮಾರ ಸ್ವಾಮೀಜಿ’ ವಿಷಯದ ಕುರಿತು ಮಾತನಾಡಿ, ಸಮಾಜಸೇವೆಗೆ ಶ್ರೀ ಶಿವಕುಮಾರ ಸ್ವಾಮೀಜಿ ತಮ್ಮ ಬದುಕನ್ನು ಮುಡಿಪಾಗಿಟ್ಟರು. ತಮ್ಮ ಬದುಕಿನುದ್ದಕ್ಕೂ ಅವರು ಕಾಯಕ, ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಸ್ಮರಿಸಿದರು.
ಶ್ರೀ ಸಿದ್ಧಗಂಗಾ ಮಠದ ವಿದ್ಯಾಸಂಸ್ಥೆಯಲ್ಲಿ ಮಕ್ಕಳು ಓದಿದರೆ ಉತ್ತಮ ಮಾನವರಾಗಿ ರೂಪುಗೊಳ್ಳುತ್ತಾರೆ ಎಂಬ ಭಾವನೆಯಿಂದ ಎಲ್ಲ ಪಾಲಕರು ತಮ್ಮ ಮಕ್ಕಳು ಮಠದ ಶಾಲೆಗೆ ಸೇರಿಸಲು ಬಯಸುತ್ತಾರೆ. ಮಠದಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಉತ್ತಮ ಅಹಾರ ದೊರೆಯಬೇಕು ಎಂಬುದು ಶ್ರೀಗಳ ಬಯಕೆಯಾಗಿತ್ತು. ಹೊಟ್ಟೆ ತುಂಬಿದರೆ ಮಾತ್ರ ಮಕ್ಕಳು ಏಕಾಗ್ರತೆಯಿಂದ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯ ಎಂಬ ಕಾರಣಕ್ಕೆ ಅನ್ನ ದಾಸೋಹಕ್ಕೆ ಒತ್ತು ನೀಡಿದ್ದರು. ಮಠದಲ್ಲಿ ಅಕ್ಷರ, ಅನ್ನ ದಾಸೋಹದ ಜತೆಗೆ ಮಕ್ಕಳಿಗೆ ಕಾಯಕದ ಮಹತ್ವ ತಿಳಿಸಲು ವಾರಕ್ಕೊಂದು ಬಾರಿ ಶ್ರಮದಾನ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಮಕ್ಕಳೊಂದಿಗೆ ಶ್ರೀಗಳು ಸಹ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮಕ್ಕಳಿಗೆ ತಾವು ಮಾಡುತ್ತಿದ್ದ ಕೆಲಸಹೊರೆ ಅನ್ನುಸುತ್ತಿರಲಿಲ್ಲ ಎಂದರು.
ಇಂದು ನಾವು ದೇವಸ್ಥಾನಕ್ಕೆ ಹೋದರೆ ದೇವಸ್ಥಾನದ ಗಂಟೆ, ಬಲ್ಬುಗಳ ಮೇಲೂ ದಾನಿಗಳ ಹೆಸರನ್ನು ಕಾಣಬಹುದು. ಆದರೆ, ಸಿದ್ಧಗಂಗಾ ಮಠಕ್ಕೆ ಯಾರೇ ದಾನ ನೀಡಿದರೂ ಅವರ ಹೆಸರು ಗೌಪ್ಯವಾಗಿರುತ್ತದೆ. ದಾನಿಗಳ ಹೆಸರು ಮಕ್ಕಳಿಗೆ ತಿಳಿದರೆ ಆ ದಾನಿಗೆ ಋಣಿಯಾಗಿರಬೇಕು ಎಂಬ ಭಾವನೆ ಮಕ್ಕಳಿಗೆ ಬರುತ್ತದೆ. ಅಂತಹ ಭಾವನೆ ಮಕ್ಕಳಲ್ಲಿ ಬರಬಾರದು ಎಂಬ ಕಾರಣಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿ ದಾನಿಗಳ ಹೆಸರನ್ನು ಬಹಿರಂಗ ಪಡಿಸುತ್ತಿರಲಿಲ್ಲ. ಒಂದುವೇಳೆ ಹೆಸರಿಗೋಸ್ಕರ ದಾನ ನೀಡಿದರೆ ಆ ದಾನ ತನ್ನ ಮಹತ್ವ ಕಳೆದು ಕೊಳ್ಳುತ್ತದೆ ಎಂಬುದು ಶರಣರ ಅಭಿಪ್ರಾಯವಾಗಿದೆ. ದಾಸೋಹ ಕಲ್ಪನೆಗೆ ದೈವಿಕ ಕಲ್ಪನೆ ತರಲು ಶರಣರು ಸಾಕಷ್ಟು ಶ್ರಮಿಸಿದ್ದರು. ಆ ದೈವಿಕ ಕಲ್ಪನೆಯನ್ನು ಕಾರ್ಯರೂಪಕ್ಕೆ ತಂದವರು ಶ್ರೀ ಶಿವಕುಮಾರಸ್ವಾಮಿಗಳು. ಇಂತಹ ವ್ಯವಸ್ಥೆಯಿಂದ ಕೊಡುವವರೂ ಶ್ರೇಷ್ಠನಾಗುತ್ತಾರೆ, ಸ್ವೀಕರಿಸುವವರೂ ಶ್ರೇಷ್ಠರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕೊಳ್ಳೇಗಾಲದ ಮುಡಿಗುಂಡ ಶ್ರೀ ವಿರಕ್ತಮಠದ ಶ್ರೀಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.