ಕಮಲಾಕ್ಷಿ ಸೊಸೈಟಿ ಅಧ್ಯಕ್ಷರ ಆಸ್ತಿಪಾಸ್ತಿ ಜಪ್ತಿಗೆ ಕ್ರಮ

IMG-20221230-WA0004
Published on

ಉಡುಪಿ : ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಸಂಬಂಧಿಸಿದಂತೆ ಸಂಘದ ಹೆಸರಿನಲ್ಲಿ ಹಾಗೂ ಆರೋಪಿಗಳ ಹೆಸರಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಆಸ್ತಿಗಳಿವೆ ಎಂಬುದನ್ನು ಗುರುತಿಸಿ, ಈ ಆಸ್ತಿಗಳನ್ನು ಪರಾಬಾರೆ ಮಾಡಬಾರದು ಎಂದು ಸೆನ್ ಪೊಲೀಸರು ನಗರಸಭೆ ಪೌರಾಯುಕ್ತರು, ಎಲ್ಲಾ ತಹಶೀಲ್ದಾರರು ಹಾಗೂ ಉಪನೋಂದಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಸಾರ್ವಜನಿಕರಿಗೆ 10 % ರಿಂದ 12 % ರವರೆಗೆ ಬಡ್ಡಿದರ ನೀಡುವುದಾಗಿ ಸುಮಾರು 700 ಜನರಿಂದ 40 ರಿಂದ 50 ಕೋಟಿ ಹಣವನ್ನು ಹೂಡಿಕೆ ಮಾಡಿಸಿಕೊಂಡಿರುತ್ತಾರೆ. ಆದರೆ ಜೂನ್‌ನಿಂದ   ಹೂಡಿಕೆದಾರರಿಗೆ ಬಡ್ಡಿಯನ್ನು ನೀಡದೇ ಕಚೇರಿಯನ್ನು ಮುಚ್ಚಿಕೊಂಡು ಹೋಗಿರುವ ಬಗ್ಗೆ ಪ್ರಕಾಶ್‌ ಕಾಮತ್‌ ದೂರು ನೀಡಿದ್ದರು. ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಅಧ್ಯಕ್ಷ ಬಿ.ವಿ ಲಕ್ಷ್ಮೀನಾರಾಯಣ ಎಂಬಾತನನ್ನು ಬಂಧಿಸಿದ್ದಾರೆ.

ನಿರ್ದೇಶಕರಾದ ರವಿ ಉಪಾಧ್ಯ, ಬಿ.ವಿ ಬಾಲಕೃಷ್ಣ, ಭಾಸ್ಕರ್‌ ಉಪಾಧ್ಯ, ಉದಯ ಉಪಾಧ್ಯ, ರಾಧಿಕ ಲಕ್ಷ್ಮೀ ನಾರಾಯಣ, ಸುಜಾತ ಬಾಲಕೃಷ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಘದ ಹೆಸರಿನಲ್ಲಿ ಹಾಗೂ ಆರೋಪಿಗಳ ಹೆಸರಿನಲ್ಲಿರುವ ಬ್ಯಾಂಕ್‌ ಹಾಗೂ ಸೊಸೈಟಿ ಖಾತೆಗಳನ್ನು Debit Freeze ಮಾಡುವಂತೆ ಎಲ್ಲಾ ಬ್ಯಾಂಕ್‌ ಹಾಗೂ  ಸೊಸೈಟಿಗಳಿಗೆ ಸೂಚನೆ ನೀಡಲಾಗಿದೆ.

ಸಂಘ ಹಾಗೂ ಆರೋಪಿಗಳಿಗೆ  ಸಂಬಂಧಿಸಿದ ಆಸ್ತಿಯನ್ನು ಜಪ್ತಿ ಮಾಡಿ, ನ್ಯಾಯಾಲಯಕ್ಕೆ Attach ಮಾಡಲಾಗುವುದು. ಈ ಆಸ್ತಿಗಳನ್ನು ನಿಯಮಾನುಸಾರ ವಿಲೇ ಮಾಡಿ, ಹೂಡಿಕೆದಾರರಿಗೆ ಪರಿಹಾರವನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ.

ಇತ್ತೀಚೆಗೆ ಪೊಲೀಸರು ನ್ಯಾಯಾಲಯದಿಂದ ಶೋಧನಾ ವಾರೆಂಟ್‌ ಪಡೆದು ಸಂಘದ ಕಚೇರಿಯಲ್ಲಿ ಶೋಧನೆ ಮಾಡಿ ತನಿಖೆಗೆ ಅಗತ್ಯ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡು, ಸಹಕಾರಿ ಸಂಘದ ಕಚೇರಿಯನ್ನು ಸೀಲ್‌ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ 100 ಜನ ಹೂಡಿಕೆದಾರರು ಹೂಡಿಕೆಗೆ ಸಂಬಂಧಿಸಿದ ದಾಖಲೆಗಳನ್ನು CEN ಅಪರಾಧ ಪೊಲೀಸ್ ಠಾಣೆಗೆ ನೀಡಿದ್ದು, ಇನ್ನೂ 500 ರಿಂದ 600 ಜನ ಹೂಡಿಕೆದಾರರು ದಾಖಲೆಗಳನ್ನು ಹಾಜರುಪಡಿಸಲು ಬಾಕಿ ಇರುತ್ತದೆ. ಅದ್ದರಿಂದ ಠಾಣೆಗೆ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net