ಒಗ್ಗಟ್ಟಿನಿಂದ ಮಾತ್ರ ಸಮಾಜ ಸದೃಢವಾಗಲು ಸಾಧ್ಯ

22-01-Shiva-7
ರಾಯಚೂರಿನ ಎಸ್‌ಆರ್‌ಕೆ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಗಾಣಿಗ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಧು ವರರ ಸಮಾವೇಶವನ್ನು ಸಮಾಜದ ಮುಖಂಡ ಅಮರಗುಂಡಪ್ಪ ಮೇಟಿ ಉದ್ಘಾಟಿಸಿದರು. ಡಾ.ಜಯಬಸವಕುಮಾರ ಸ್ವಾಮೀಜಿ, ಸಮಾಜದ ಜಿಲ್ಲಾಧ್ಯಕ್ಷ ಚನ್ನಪ್ಪ ಸಜ್ಜನ್, ತಾಲೂಕು ಅಧ್ಯಕ್ಷ ಬಸಪ್ಪ ಹಳ್ಳಿ, ಪದಾಕಾರಿಗಳಾದ ಉಮೇಶ ಸಜ್ಜನ್, ಪ್ರಭುಲಿಂಗ ಸಜ್ಜನ್, ವಿರುಪಾಕ್ಷಿ ಇದ್ದರು.
Published on

ರಾಯಚೂರು: ಯಾವುದೇ ಒಂದು ಸಮಾಜ ಸದೃಢವಾಗಿ ಬೆಳೆಯಲು ಸಮಾಜದ ಜನರು ಒಗ್ಗಟ್ಟಾಗಿದ್ದಾಗ ಮಾತ್ರ ಸಾಧ್ಯವಾಗಲಿದೆ. ಪ್ರಸ್ತುತ ದಿನಮಾನದಲ್ಲಿ ನಾವು ಒಂದಾಗಿ, ಒಗ್ಗಟ್ಟಾಗಿ ಮುನ್ನಡೆಯದಿದ್ದರೆ ಸಮಾಜವನ್ನು ಬೆಳೆಸಲು ಸಾಧ್ಯವಿಲ್ಲ ಎಂದು ವಿಜಯಪುರದ ವನಶ್ರೀ ಮಠದ ಡಾ.ಜಯಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಎಸ್‌ಆರ್‌ಕೆ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಗಾಣಿಗ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಧು ವರರ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ಸಮಾಜದ ಬಗ್ಗೆ ಅಭಿಮಾನ ಹೊಂದಿರುವುದರ ಜತೆಗೆ ಬೇರೆ ಸಮಾಜಗಳನ್ನು ಗೌರವಿಸಬೇಕು ಎಂದರು.
ಪಾಲಕರು ತಮ್ಮ ಮಕ್ಕಳಿಗೆ ಮದುವೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿರುತ್ತಾರೆ. ಸಮಾಜದ ವತಿಯಿಂದ ಬಾಂಧವ್ಯವನ್ನು ಬೆಸೆಯುವ ನಿಟ್ಟಿನಲ್ಲಿ ಮತ್ತು ವಧು-ವರಾನ್ವೇಷಣೆಯಲ್ಲಿ ಇರುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
ಸಮಾಜದ ಹಿರಿಯ ಮುಖಂಡ ಅಮರಗುಂಡಪ್ಪ ಮೇಟಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಮಾಜದ ಜನರು ಸ್ವಾರ್ಥವನ್ನು ತೊರೆದು ಒಗ್ಗೂಡಿ ಸಮಾಜದ ಏಳಿಗೆಗಾಗಿ ದುಡಿಯಲು ಮುಂದೆ ಬರಬೇಕು. ಆಗ ಮಾತ್ರ ನಾವು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.
ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಚನ್ನಪ್ಪ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆ ಹಾಗೂ ಆಂಧ್ರ, ತೆಲಂಗಾಣದಿಂದ ಸುಮಾರು 100ಕ್ಕೂ ಹೆಚ್ಚು ವಧು-ವರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ಬಸಪ್ಪ ಹಳ್ಳಿ, ಪದಾಕಾರಿಗಳಾದ ಶಕುಂತಲಾ ಅಣ್ಣಾರಾವ್ ಪಾಟೀಲ್, ಉಮೇಶ ಸಜ್ಜನ್, ಪ್ರಭುಲಿಂಗ ಸಜ್ಜನ್, ವಿರುಪಾಕ್ಷಿ, ಬಸವರಾಜ, ಲಕ್ಷ್ಮಿಬಾಯಿ, ವಿಜಯಕುಮಾರ ಸಜ್ಜನ್, ಅಣ್ಣಾರಾವ್ ಪಾಟೀಲ್, ಉಮೇಶ, ಡಾ.ಕೇಶವ ಕಾಬಾ, ಜೆ.ಎಂ.ಜಗದೀಶ್ವರ್, ರಾವುತರಾವ್ ಬರೂರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net