ಹಾಸ್ಯದ ಮುಖೇನ ಸಮಾಜ ತಿದ್ದಲು ಸಾಧ್ಯ:ಬಾಬು ಕೃಷ್ಣಮೂರ್ತಿ ಅಭಿಮತ

MNS
Published on

ಬೆಂಗಳೂರು: ಹಾಸ್ಯ ಸಾಹಿತ್ಯ ಜೀವನದಲ್ಲಿ ನೆಮ್ಮದಿ ಉಂಟು ಮಾಡುತ್ತದೆ. ಹಾಸ್ಯದ ಮುಖೇನ ಸಮಾಜವನ್ನು ತಿದ್ದಬಹುದು. ಇಂಥ ಒಳ್ಳೆಯ ಕಾರ್ಯವನ್ನು ಎಂ.ಎಸ್​. ನರಸಿಂಹಮೂರ್ತಿ ಮಾಡುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ ಹೇಳಿದ್ದಾರೆ.

ಜಾಗೃತಿ ಟ್ರಸ್ಟ್​ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ "ಕನ್ನಡ ನಾಡು&ನುಡಿ ನಿತ್ಯೋತ್ಸವ' ಹಾಗೂ ಎಂಎಸ್​ಎನ್​-75 ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾಸ್ಯ ಸಾಹಿತ್ಯ ಕ್ಷೇತ್ರಕ್ಕೆ ತನ್ನದೆ ಕೊಡುಗೆ ಕೊಟ್ಟಿರುವ ಎಂಎಸ್​ಎನ್​, ಕಿರುತೆರೆಯ 12 ಸಾವಿರ ಸಂಚಿಕೆಗಳಿಗೆ ಸಂಭಾಷಣೆ ಬರೆದಿರುವುದು ಸಾಮಾನ್ಯವಲ್ಲ. 55 ವರ್ಷಗಳಲ್ಲಿ ಹಂತ ಹಂತವಾಗಿ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಹಾಸ್ಯದ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸವನ್ನು ಅವರು ಇನ್ನಷ್ಟು ಮಾಡುವಂತಾಗಲಿ ಎಂದು ಆಶಿಸಿದರು.

ಹಿರಿಯ ವೈದ್ಯ ಡಾ.ನಾ. ಸೋಮೇಶ್ವರ್​ ಮಾತನಾಡಿ, ಮಹಾಭಾರತ ಕಾಲದಲ್ಲಿದ್ದ ನಿಯೋಗ ಪದ್ಧತಿಯೇ ಇಂದಿನ ಐವಿಎಫ್​​​ ಆಗಿ ಪರಿವರ್ತನೆಯಾಗಿದೆ. ಎಂಎಸ್​ಎನ್​ ರಚಿಸಿರುವ "ಪುತ್ರಕಾಮ್ಯ' ಕಾದಂಬರಿ ಓದುಗರನ್ನು ನಗಿಸುತ್ತ ಓದಿಸಿಕೊಳ್ಳುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಎಂಎಸ್​ಎನ್​ ರಚನೆಯ "ಪುತ್ರಕಾಮ್ಯ' ಕಾದಂಬರಿ ಹಾಗೂ ಬಿ. ನಾಗೇಶ್​ ರಚನೆಯ "ನಾ ಕಂಡಂತೆ ಎಂಎಸ್​ಎನ್​' ಪುಸ್ತಕಳನ್ನು ಬಿಡುಗಡೆ ಮಾಡಲಾಯಿತು. ಸಾರಿಗೆ ಇಲಾಖೆ ಉಪ ಕಾರ್ಯದರ್ಶಿ ಬಿ.ಎಸ್​. ಮಂಜುನಾಥ್​ ಅವರು ನಾಡಪ್ರಭು ಕೆಂಪೇಗೌಡರ ತಾಯಿ ಕೆಂಪಮ್ಮ ಸಾಧನೆ ಕುರಿತು ಮಾತನಾಡಿದರು. ಎಂಎಸ್​ಎನ್​, ಮಿಮಿಕ್ರಿ ಗೋಪಿ, ಉಮೇಶ್​ ಗೌಡ ನಡೆಸಿಕೊಟ್ಟ ಕಾರ್ಯಕ್ರಮ ಸಭಿಕರನ್ನು ನೆಗೆಗಡಲಲ್ಲಿ ತೇಲಿಸಿತು.10 ಸಾಧಕಿಯರಿಗೆ "ಕೆಂಪಮ್ಮ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೇಖಕ ಎನ್​. ರಾಮನಾಥ್​, ಟ್ರಸ್ಟ್​ನ ಅಧ್ಯಕ್ಷ ಬಿ. ನಾಗೇಶ್​, ಕಾರ್ಮಿಕ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ಸಂಗಮೇಶ್​ ಉಪಾಸೆ ಇತರರಿದ್ದರು.

ಶಿಸ್ತಿನ ಬರವಣಿಗೆಗೆ ಎಂಎಸ್​ಎನ್​ ಹೆಸರುವಾಸಿ. "ಪಾಪ ಪಾಂಡು', "ಸಿಲ್ಲಿ ಲಲ್ಲಿ' ಸೇರಿ ವಿವಿಧ ಕಿರುತೆರೆಗಾಗಿ 12 ಸಾವಿರ ಸಂಚಿಕೆಗಳಿಗೆ ಬರೆದಿದ್ದಾರೆ. ನಮಗೆ 8 ಸಾವಿರ ಎಪಿಸೋಡ್​ ಬರೆದಿದ್ದಾರೆ. ಅವರು ಬರೆದಿರುವ ಹಾಸ್ಯದ ಅಂಶಗಳು ಯಾವ ಸಂಚಿಕೆಯಲ್ಲೂ ಪುನರಾವರ್ತನೆಯಾಗಿಲ್ಲ ಎಂಬುದೇ ಅವರ ಪ್ರತಿಭೆಗೆ ಸಾಕ್ಷಿ.

"ಸಿಹಿಕಹಿ' ಚಂದ್ರು. ಕಿರುತರೆ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net