ಮಕ್ಕಳ ಸಮಗ್ರ ಪ್ರಗತಿಗೆ ಶ್ರಮಿಸಿ

dj clk swamiji
Published on

ಚಳ್ಳಕೆರೆ: ಮಕ್ಕಳ ಸಮಗ್ರ ಪ್ರಗತಿ, ಅವರ ವಿಕಾಸಕ್ಕೆ ಸಂಘ-ಸಂಸ್ಥೆಗಳು ಹೆಚ್ಚು ಶ್ರಮಿಸಬೇಕು ಎಂದು ಪಾಲ್ತೂರು ಕಲ್ಲು ಹೊಳೆಮಠ ಮಠದ ತಪೋರತ್ನ ಶ್ರೀ ಚನ್ನವೀರಶಿಚಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಮಾಜದಲ್ಲಿನ ಪ್ರತಿ ವರ್ಗವೂ ಪ್ರಗತಿಪರ ಸಮಾಜ ನಿರ್ಮಾಣಕ್ಕೆ ಚಿಂತನೆ ನಡೆಸಬೇಕು. ಸಾತ್ವಿಕ ಜನರ ಜತೆ ಸ್ನೇಹ ಮಾಡಬೇಕು. ಸಾತ್ವಿಕರ ಸಂಘಟನಾ ಶಕ್ತಿಗಳಿಂದ ಮಾನವೀಯ ಸಮಾಜ ಕಟ್ಟಬೇಕಿದೆ.

ಇಂತಹ ಒಳ್ಳೆಯ ಕಾರ್ಯಕ್ಕೆ ಅಡ್ಡಿಯಾಗುವ ದೃಷ್ಟರು ಬಿರುಗಾಳಿಗೆ ಬಿದ್ದು ಹೋಗುವ ಮರಗಳಂತೆ ಮತ್ತೆ ಮೇಲೇಳುವುದಿಲ್ಲ ಎಂದು ಹೇಳಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ಶಿಕ್ಷಣದಿಂದ ಸಮಾಜದ ಬಲವರ್ಧನೆ ಆಗಲು ಸಾಧ್ಯ.

ಮಕ್ಕಳಲ್ಲಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮ ಪ್ರತಿಭೆ ಗುರುತಿಸುವ ಮೂಲಕ ಮಹತ್ವವಾದ ಶಿಕ್ಷಣದ ಬಲವರ್ಧನೆ ರೂಪಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.

ಮಕ್ಕಳನ್ನು ಕುಟುಂಬ ಮತ್ತು ಒಂದು ವರ್ಗಕ್ಕೆ ಸೀಮಿತವಾಗಿಸದೆ ಸಮಾಜದ ಪ್ರತಿಭಾವಂತರಾಗಿ ಬೆಳೆಸಬೇಕು. ಸಮಾಜ ಮತ್ತು ದೇಶದ ಅಭಿಮಾನ ವಿದ್ಯಾರ್ಥಿಗಳ ಚಿಂತನೆ ಆಗಬೇಕು ಎಂದು ಹೇಳಿದರು.

ಸಚಿವ ಡಿ.ಸುಧಾಕರ್, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಇತರರು ಮಾತನಾಡಿದರು. ನಗರಸಭಾ ಸದಸ್ಯ ಕೆ.ಸಿ.ನಾಗರಾಜ,

ಸಿ.ಗುರುಸಿದ್ದಮೂರ್ತಿ, ಪಿ.ಜಗದೀಶ್, ಬಿ.ಎಸ್.ಶಿವಪುತ್ರಪ್ಪ, ಎನ್.ಸತೀಶ್‌ಬಾಬು, ಡಾ.ಕೆ.ಎಂ.ಜಯಕುಮಾರ್, ಮಂಜುನಾಥ, ನಾಗರಾಜ ಇತರರಿದ್ದರು.

ತಾಲೂಕು ವೀರಶೈವ ಲಿಂಗಾಯತ ನೌಕರರ ಸಂಘ, ವೀರಶೈವ ಸಮಾಜ ಸೇವಾ ಸಂಘ, ತಾಲೂಕು ವೀರಶೈವ ಸಂಘಗಳ ಒಕ್ಕೂಟ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net