ಸಮಾಜ ದುರುಪಯೋಗದ ಎಚ್ಚರ ಇರಲಿ

11 kurugodu 01
ಕುರುಗೋಡು ತಾಲೂಕಿನ ಸೋಮಲಾಪುರ ಬಳಿ ಕನಕ ಕುಠೀರ ನಿರ್ಮಾಣಕ್ಕೆ ಕಾಗಿನೆಲೆ ಕನಕ ಗುರುಪೀಠದ ತಿಂಥಣಿ ಬ್ರಿಡ್ಜ್ ಶಾಖಾಮಠದ ಪೀಠಾಧ್ಯಕ್ಷ ಸಿದ್ದರಾಮನಂದ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು. ಗೋವರ್ಧನ ನಂದಪುರಿ ಸ್ವಾಮೀಜಿ, ಎಸ್.ಕೆ.ಎಂ.ಪಂಪನಗೌಡ, ಕೆ.ಮಲ್ಲಿಕಾರ್ಜುನ, ಚಾನಾಳ್ ಚನ್ನಬಸವ, ಮೂರುಣ್ಣೆ ವಿರೂಪಾಕ್ಷಿ, ಎರ‌್ರಿಗೌಡ, ಮಲ್ಲಯ್ಯ ಇದ್ದರು.
Published on

ಕುರುಗೋಡು: ತಂದೆ, ತಾಯಿ, ಪ್ರಕೃತಿಯನ್ನು ಗೌರವಿಸಿ ಆರಾಧಿಸುವುದು ಹಾಲುಮತದ ಸಂಸ್ಕೃತಿ ಎಂದು ಕಾಗಿನೆಲೆ ಕನಕ ಗುರುಪೀಠದ ತಿಂಥಣಿ ಬ್ರಿಡ್ಜ್ ಶಾಖಾಮಠದ ಪೀಠಾಧ್ಯಕ್ಷ ಸಿದ್ದರಾಮನಂದ ಸ್ವಾಮೀಜಿ ಹೇಳಿದರು.

ಸೋಮಲಾಪುರ ಗ್ರಾಮದ ಬಳಿ ಹಾಲುಮತ ಸಮಾಜದಿಂದ ಸೋಮವಾರ ಆಯೋಜಿಸಿದ್ದ ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿ ಶ್ರಾವಣ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾದವ, ಬೇಡ, ಕುರುಬ ಸಮುದಾಯ ಸೇರಿ ಹಾಲುಮತ ಸಮಾಜವಾಗಿದ್ದು, ಮೂರು ಸಾವಿರ ವರ್ಷದ ಹಿಂದೆಯೇ ಸಮಾಜಕ್ಕೆ ಸಂಸ್ಕೃತಿಯನ್ನು ಕೊಡುಗೆಯಾಗಿ ನೀಡಿದೆ. ಹೀಗಾಗಿ ನಮ್ಮ ಇತಿಹಾಸ ಮತ್ತು ಆಚಾರ ಮುಂದಿನ ಪೀಳಿಗೆಗೆ ಬಿತ್ತುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.

ಗುರುವಿನಿಂದ ಭಂಡಾರ ಪಡೆದು ಪಾಂಡವರನ್ನು ಸೋಲಿಸಿದ ಮಾಳಿಂಗರಾಯ ಹಾಗೂ ಶೈವ ಸಂಸ್ಕೃತಿ ಉಳಿವಿಗಾಗಿ 18 ಸಮುದಾಯಕ್ಕೆ ಪ್ರತ್ಯೇಕ ಮಠ ನಿರ್ಮಾಣಕ್ಕೆ ಶ್ರಮಿಸಿದ ರೇವಣಸಿದ್ದೇಶ್ವರ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ. ಇಂತಹ ಶ್ರೇಷ್ಠ ಮತದಲ್ಲಿ ಪ್ರಸ್ತುತ ದುಶ್ಚಟ, ಸೋಮಾರಿತನದಿಂದ ಚಿಕ್ಕ ವಯಸ್ಸಿನಲ್ಲಿಯೇ ಅಸುನೀಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲು ಶ್ರಾವಣಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಮಾಜ ಕೇವಲ ರಾಜಕೀಯಕ್ಕೆ ಮಾತ್ರ ಬಳಸಿಕೊಂಡು ಅಧಿಕಾರದಿಂದ ದೂರ ಇಡುವ ವ್ಯವಸ್ಥೆ ಬಗ್ಗೆ ಎಚ್ಚರ ಇರಲಿ. ಮುಂಬರುವ ಜಿಪಂ, ತಾಪಂ, ಗ್ರಾಪಂ ಚುನಾವಣೆಯಲ್ಲಿ ಪಕ್ಷ, ರಾಗ, ದ್ವೇಷವನ್ನು ಬಿಟ್ಟು ಗೆಲ್ಲಿಸುವ ಪ್ರಯತ್ನವಾಗಲಿ ಎಂದು ಸಿದ್ದರಾಮನಂದ ಸ್ವಾಮೀಜಿ ತಿಳಿಸಿದರು.

ಸ್ಥಳದಾನಿ ಡಾ.ಎಸ್.ಕೆ.ಎಂ.ಪಂಪನಗೌಡ ಮಾತನಾಡಿ, ಸಮುದಾಯ ಮುನ್ನೆಲೆಗೆ ಬರಲು ಶಿಕ್ಷಣ ಅಗತ್ಯ. ನನ್ನ ತಂದೆಯ ಆಸೆಯಂತೆ ಜಾಗವನ್ನು ಕನಕ ಕುಠೀರಕ್ಕೆ ದಾನ ನೀಡಲಾಗಿದ್ದು, ಈ ಜಾಗ ಶಕ್ತಿ ಪೀಠವಾಗಲಿ ಎಂದರು. ಗೋವರ್ಧನ ನಂದಪುರಿ ಸ್ವಾಮೀಜಿ, ಪ್ರಮುಖರಾದ ಕೆ.ಮಲ್ಲಿಕಾರ್ಜುನ, ಚಾನಾಳ್ ಚನ್ನಬಸವ, ಮೂರುಣ್ಣೆ ವಿರೂಪಾಕ್ಷಿ, ಎರ‌್ರಿಗೌಡ, ಸೋಮಲಾಪುರ ಪಂಪಣ್ಣ, ಸಂಗನಕಲ್ಲು ಗಾದಿಲಿಂಗಪ್ಪ, ಸಿರಿಗೇರಿ ಬಸವರಾಜ್, ವಿರುಪಾಪುರ ಬಸವರಾಜ್, ಮಲ್ಲಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net