

ಕಾಗವಾಡ: ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳು ರೈತರು ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ಜೀವನದ ಆರ್ಥಿಕ ಗುಣಮಟ್ಟ ಹೆಚ್ಚಿಸುತ್ತಿವೆ ಎಂದು ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಹಾಗೂ ಜುಗೂಳ ಸಂಘದ ಅಧ್ಯಕ್ಷ ಅಣ್ಣಾಸಾಬ ಪಾಟೀಲ ಹೇಳಿದರು.
ತಾಲೂಕಿನ ಜುಗೂಳ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಬುಧವಾರ ಹಮ್ಮಿಕೊಂಡಿದ್ದ 106ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು. 2024-25ನೇ ಸಾಲಿನಲ್ಲಿ ಸಂಘಕ್ಕೆ 88.99 ಲಕ್ಷ ರೂ. ನಿವ್ವಳ ಲಾಭವಾಗಿದ್ದು, ಸದಸ್ಯರಿಗೆ ಶೇ.16 ಲಾಭಾಂಶ ವಿತರಿಸಲಾಗುವುದು.
ಸಂಘ 51.69 ಕೋಟಿ ರೂ. ದುಡಿಯುವ ಬಂಡವಾಳ, 30.97 ಕೋಟಿ ರೂ. ಠೇವಣಿ, 2 ಕೋಟಿ ರೂ. ಷೇರು ಬಂಡವಾಳ, 5.13 ಕೋಟಿ ಸ್ವಂತನಿಧಿ ಹೊಂದಿದ್ದು, 31.17 ಕೋಟಿ ರೂ. ಸಾಲ ವಿತರಿಸಿದೆ. ಸ್ವಾವಲಂಬಿಗಳಾಗಿ ಬದುಕಲು ಸ್ತ್ರೀಶಕ್ತಿ ಸಂಘಗಳಿಗೆ 60.35 ಲಕ್ಷ ರೂ. ಹಾಗೂ ರೈತರಿಗೆ 21 ಲಕ್ಷ ರೂ. ಗೊಬ್ಬರ ಸಾಲ ವಿತರಿಸಲಾಗಿದೆ. ಶೇ.97 ಬೆಳೆಸಾಲ ವಸೂಲಾತಿಯಾಗಿದೆ. ಬಿಡಿಪಿ ಸಾಲ ವಸೂಲಾತಿ ಶೇ.91ರಷ್ಟಿದ್ದು, ಅ ಅಡಿಟ್ ವರ್ಗದಲ್ಲಿದೆ ಎಂದರು.
ಕಾರ್ಯನಿರ್ವಾಹಕ ಅಧಿಕಾರಿ ರಾಜಕುಮಾರ ಹುನ್ನರಗೆ ವಾರ್ಷಿಕ ವರದಿ ಓದಿದರು. ಸುಧಾಕರ ಗಣೇಶವಾಡಿ ಅಧ್ಯಕ್ಷತೆ ವಹಿಸಿದ್ದರು. ಪರಮಾನಂದವಾಡಿ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಹಕಾರಿ ಸಂಘಗಳ ಜಿಲ್ಲಾ ಉಪನಿಬಂಧಕ ರವೀಂದ್ರ ಪಾಟೀಲ ದಂಪತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಎಂ.ಸಿ.ಹೂಗಾರ ಮತ್ತು ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಧರೆಪ್ಪ ನಾಯಿಕ ಮತ್ತು ಅಭಿಯಂತರಾದ ರವಿ ಘಟಗೆ, ಕಿರಣ ಪಾಟೀಲ ಅವರನ್ನು ಸನ್ಮಾನಿಸಲಾಯಿತು.