ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಪಕ್ಷ ಸ್ಪರ್ಧೆ

Socialist Unity Center of India (Communist) Party competition
Published on

ಮಡಿಕೇರಿ:

ದುಡಿಯುವ ಜನರ, ರೈತರ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ದಿನನಿತ್ಯ ಹೋರಾಟ ಮಾಡುತ್ತಿರುವ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಪಕ್ಷ ಈ ಚುನಾವಣೆಯಲ್ಲಿ ಕೊಡಗು-ಮೈಸೂರು ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿರುವುದಾಗಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ.ರವಿ ತಿಳಿಸಿದರು. ೧೯ ರಾಜ್ಯ, ಅಂಡಮಾನ್ ಸೇರಿದಂತೆ ೩ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ೧೫೧ ಅಭ್ಯರ್ಥಿಗಳಿ ಕಣಕ್ಕೆ ಇಳಿಯುತ್ತಿದ್ದಾರೆ. ರಾಜ್ಯದಲ್ಲಿ ೧೯ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಾಗುತ್ತಿದೆ. ಕೊಡಗು-ಮೈಸೂರು ಕ್ಷೇತ್ರದಿಂದ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸುನಿಲ್ ಟಿ.ಆರ್. ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ೧೦ ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ೨೦೧೪ರಲ್ಲಿ ಬಿಜೆಪಿ ಧ್ವನಿ ಎತ್ತಿದ್ದ ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಬಗ್ಗೆ ಈಗ ಮೌನವಾಗಿದೆ. ಅಬ್ಬರದ ಪ್ರಚಾರ ಮಾಡಿದ್ದ ಗುಜರಾತ್ ಮಾದರಿ ಅದೃಶ್ಯವಾಗಿದೆ. ಕೊನೆಗೂ ಹೊರಬಂದಿರುವ ಚುನಾವಣಾ ಬಾಂಡ್‌ಗಳು ದೇಶದ ಅತಿ ದೊಡ್ಡ ಹಗರಣ ಎನ್ನುವುದನ್ನು ಸಾಬೀತು ಮಾಡಿದೆ.

ಇಂದಿಗೂ ಜಾಗತಿಕ ಹಸಿವಿನ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಪಾತಾಳದಲ್ಲಿದೆ. ಆದರೆ ಮೋದಿಯವರು ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಇಷ್ಟು ವರ್ಷ ಆಳ್ವಿಕೆ ನಡೆಸಿ ದೇಶವನ್ನು ಹಾಳುಗೆಡವಿದ ಕಾರಣ ದೇಶವನ್ನು ಅಭಿವೃದ್ಧಿಯ ಪಥಕ್ಕೆ ತರಲು ಇನ್ನೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಾರೆ. ಹಿಂದೆ ಕಾಂಗ್ರೆಸ್ ಆಳ್ವಿಕೆಯಲ್ಲಿ ಅವರು ಇದೇ ರೀತಿ ಬ್ರಿಟಿಷರ ಮೇಲೆ ಗೂಬೆ ಕೂರಿಸುತ್ತಿದ್ದರು.
ಇನ್ನೊಂದೆಡೆ, ಜನರ ಮತವನ್ನು ಕೋಮುವಾದದ ಮೂಲಕ ಧ್ರುವೀಕರಣ ಮಾಡಲು ಮಂದಿರ, ಮಸೀದಿ, ಬಾವುಟ, ಘೋಷಣೆ, ಸಿಎಎ ಮುಂತಾದ ಬಗೆಬಗೆಯ ದಾರಿಗಳನ್ನು ಬಿಜೆಪಿ ಹುಡುಕುತ್ತಿದೆ. ಚುನಾವಣಾ ಆಯೋಗವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಚುನಾವಣಾ ಆಯುಕ್ತರ ನೇಮಕಾತಿ ಕಾಯಿದೆಗೆ ತಿದ್ದುಪಡಿ ತಂದಿದೆ. ಇಡಿ, ಆದಾಯ ತೆರಿಗೆ ಇಲಾಖೆ, ಸಿಬಿಐಯಂತಹ ಪ್ರತಿಯೊಂದು ತನಿಖಾ ಸಂಸ್ಥೆಗಳನ್ನು ಕೂಡ ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಬಿಜೆಪಿ ಬಳಸುತ್ತಿದೆ ಎಂದು ಆರೋಪಿಸಿದರು.

ಎನ್‌ಡಿಎಗೆ ಪರ್ಯಾಯ ಐಎನ್‌ಡಿಎ ಎಂದು ಬಿಂಬಿಸಲಾಗಿದೆ. ಎರಡು ಒಕ್ಕೂಟಗಳೂ ಕೈಗಾರಿಕೋದ್ಯಮಿ, ಬಂಡವಾಳಶಾಹಿ ಪರ ನೀತಿ ತರುವುದರಲ್ಲಿ ಸಂಶಯವಿಲ್ಲ. ಕೋಮುವಾದ ಮತ್ತು ಬಂಡವಾಳಶಾಹಿ ಒಂದಕ್ಕೊಂದು ಅಂಟಿಕೊಂಟಿದೆ. ಎರಡು ಒಕ್ಕೂಟಗಳಿಂದಲೂ ಜನರಿಗೆ ಉಪಯೋಗ ಇಲ್ಲ. ಸಿಪಿಐ, ಸಿಪಿಐಎಂನಂತಹ ಎಡಪಕ್ಷಗಳು ಕೆಲವು ಎಂಪಿ ಸೀಟುಗಳ ಆಸೆಗೆ ಇಂಡಿಯಾ ಮೈತ್ರಿಕೂಟ ಸೇರಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಪಕ್ಷ ಶೋಷಿತ ಜನರ ನೈಜ ಹೋರಾಟದ ಪರವಾಗಿ ತನ್ನ ಶಕ್ತಿ ಮೀರಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂದರು.

ಅಭ್ಯರ್ಥಿ ಸುನಿಲ್ ಟಿ.ಆರ್. ಮಾತನಾಡಿ ಜನಗಳ ಸಮಸ್ಯೆ ಹೆಚ್ಚು ಚರ್ಚೆ ಆಗಬೇಕು. ಜನರ ಹೋರಾಟ ಗೌರವಿಸಬೇಕು. ಈ ನಿಟ್ಟಿನಲ್ಲಿ ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದರು.
ಪಕ್ಷದ ಮತ್ತೊಬ್ಬ ರಾಜ್ಯ ಸಮಿತಿ ಸದಸ್ಯೆ ಉಮಾದೇವಿ, ಸುಭಾಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net