

ಮೈಸೂರು: ಸಮಾಜವಾದ ಎಂಬುದು ಪ್ರಸ್ತುತ ಸಂವಿಧಾನದಲ್ಲಿ ಮಾತ್ರ ಉಳಿದಿರುವ ಸ್ಥಿತಿಯಲ್ಲಿ ಇದ್ದು, ನಾವೆಲ್ಲ ಇಂದು ಅತ್ಯಂತ ಬಿಕ್ಕಟ್ಟಿನ ಕಾಲದಲ್ಲಿದ್ದೇವೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ವಿಜಯನಗರ 1ನೇ ಹಂತದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ರಚನಾ ಪ್ರಕಾಶನ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರೊ.ಸಿ.ಪಿ. ಸಿದ್ಧಾಶ್ರಮ ರಚನೆಯ ‘ಸಿ.ಪಿ. ಸಿದ್ಧಾಶ್ರಮ ಅವರ 110 ಆಧುನಿಕ ವಚನಗಳು’ ‘ನೆಲದ ಮರೆಯ ನಿಧಾನ’ ಮತ್ತು ‘ನಾನೆಂಬುದು ನಾನಲ್ಲ’ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವೀಯ ಜಾಗವನ್ನು ಮತೀಯತೆ ಆಕ್ರಮಿಸಿಕೊಂಡಿದೆ. ಅದೇ ರೀತಿ ಸತ್ಯದ ಜಾಗವನ್ನು ಸುಳ್ಳು, ಸಾಮಾಜಿಕ ವಿವೇಕದ ಜಾಗ ವನ್ನು ಆರ್ಥಿಕ ಅವಿವೇಕ, ಸೌಹಾರ್ದದ ಜಾಗವನ್ನು ನಿಸ್ವಾರ್ಥ, ಜಾತಿ ವಿನಾಶದ ಜಾಗವನ್ನು ಜಾತಿ ವಿಕಾಶ ಆಕ್ರಮಿಸಿಕೊಂಡಿದೆ. ಪ್ರಜಾಪ್ರಭುತ್ವದ ಜಾಗವನ್ನು ಸರ್ವಾಧಿಕಾರ ಬೇರೆ ಬೇರೆ ರೂಪದಲ್ಲಿ ಆಕ್ರಮಿಸಿಕೊಳ್ಳುತ್ತಿದ್ದೆ. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ವಿಚಾರಗಳನ್ನು ಕ್ಷಮಿಸಿ ಸೈದ್ಧಾಂತಿಕವಾಗಿ ಸರಿಯಾಗಿರುವುದನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ಯಾರನ್ನೋ ಗಮನದಲ್ಲಿ ಟ್ಟುಕೊಂಡು ಟೀಕಿಸುವ ಭರದಲ್ಲಿ ಎಲ್ಲ ಸಮಾಜವಾದಿಗಳು, ವಿಚಾರವಾದಿಗಳು ಸರಿಯಲ್ಲ ಎಂಬ ಅಭಿಪ್ರಾಯಕ್ಕೆ ಬರುವುದು ಸರಿಯಲ್ಲ ಎಂದು ಹೇಳಿದರು.
ಎಲ್ಲ ಸಾಹಿತಿಗಳಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇರಬೇಕು, ಅದುವೇ ನಿಜವಾದ ಕಾಳಜಿ. ಜನರ ಬಗ್ಗೆ ಕಾಳಜಿ ಹೊಂದಿದರೆ ಸಾಹಿತ್ಯದಲ್ಲಿ ಹೊಸ ನೋಟವನ್ನು ಕಂಡುಕೊಳ್ಳಬಹುದು. ಸಾಹಿತಿಗಳು ಅಕ್ಷರವನ್ನು ಆಯುಧವಾಗಿ ಮಾಡಿಕೊಳ್ಳದೆ ಅರಿವಿನ ವಿಸ್ತರಿಸುವ ಅತಃಕರಣವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.