

ಕೋಟ: ಸಮಸ್ಯೆಗಳು ಬಂದಾಗ ಎಲ್ಲರೂ ಒಟ್ಟಾಗಿ ಸೇರಿ ಚರ್ಚಿಸಿ ಪರಿಹರಿಸಿಕೊಂಡಲ್ಲಿ ಸಂಘ ಸಂಸ್ಥೆಗಳು ಬೆಳೆಯಲು ಸಾಧ್ಯ. ಕನ್ನಡದ ಏಳು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇದು ನಮ್ಮ ಕನ್ನಡ ಭಾಷೆಯ ಶ್ರೇಷ್ಠತೆಯನ್ನು ಪರಿಚಯಿಸುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟ ಪಂಚವರ್ಣ ಯುವಕ ಮಂಡಲದ ವತಿಯಿಂದ 45ನೇ ರಾಜ್ಯೋತ್ಸವ ಸಂಭ್ರಮ ಸದ್ಭಾವನಾ 2021 ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೋಟ ಜನತಾ ಸಂಸ್ಥೆ ನಿರ್ದೇಶಕ ಪ್ರಶಾಂತ್ ಕುಂದರ್, ಯುವ ಪೀಳಿಗೆಯಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿದೆ. ಕನ್ನಡದ ಬಗ್ಗೆ ಕೀಳರಿಮೆ ಬಿಟ್ಟು, ಕನ್ನಡದಲ್ಲಿ ಓದುವ, ಬರೆಯುವ ಮತ್ತು ವ್ಯವಹರಿಸುವ ಕಾರ್ಯವಾಗಬೇಕು ಎಂದರು.
ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಸಮಾಜಸೇವಕ ರವಿ ಕಟಪಾಡಿಗೆ ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ.ರಮೇಶ್ ರಾವ್ ಶುಭಾಶಂಸನೆಗೈದರು. ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ ನಾವಡ ಆಶಯ ನುಡಿಗಳನ್ನಾಡಿದರು.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ವಿಠಲ ಪೂಜಾರಿ ಐರೋಡಿ, ಉದ್ಯಮಿ ಜಯರಾಜ್ ವಿ.ಶೆಟ್ಟಿ, ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಬ್ರಾಯ ಆಚಾರ್ಯ, ಜಿ. ಸತೀಶ್ ಹೆಗ್ಡೆ, ಉಡುಪಿ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಗಾಣಿಗ ಮಾಲ್ತಾರ್, ಸಂಘದ ಸ್ಥಾಪಕ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಸಂಘದ ಗೌರವಾಧ್ಯಕ್ಷ ಸತೀಶ್ ಎಚ್. ಕುಂದರ್ ಉಪಸ್ಥಿತರಿದ್ದರು.