

ಮೈಸೂರು: ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗಾಗಿ ಹೋರಾಡುವ ಸ್ಥಿತಿ ಎದುರಾಗಿದೆ ಎಂದು ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಹೇಳಿದರು.
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಸಮಾರಂಭದಲ್ಲಿ ದಸರಾ ಮನೆ ಮನೆ ಗೊಂಬೆ ಕೂರಿಸುವ ಸ್ಪರ್ಧೆ ವಿಜೇತರಿಗೆ ಸೋಮವಾರ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಮನೆ, ಮನೆಗಳಲ್ಲಿ ಗೊಂಬೆ ಕೂರಿಸಿ ಗೃಹಿಣಿಯರು ನಮ್ಮ ಪರಂಪರೆ ಉಳಿಸಿ ಬೆಳೆಸುತ್ತಿದ್ದಾರೆ. ಆದರೆ ಸಂಸ್ಕೃತಿ ಮತ್ತು ಪರಂಪರೆ ಮಹತ್ವ ಇತ್ತೀಚೆಗೆ ಮರೆಯಾಗುತ್ತಿದೆ. ಅದರ ಉಳಿವಿಗಾಗಿ ಹೋರಾಡುವ ಸಂದರ್ಭ ಎದುರಾಗಿದೆ ಎಂದರು.
ನಮ್ಮ ಸಂಸ್ಕೃತಿ, ಪರಂಪರೆ ಉಳಿಸಲು ಪ್ರತಿಯೊಬ್ಬರು ಶ್ರಮಿಸಬೇಕು. ನಮ್ಮ ಸಂಪ್ರದಾಯ ಮತ್ತು ಧಾರ್ಮಿಕತೆಯ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದು ಒಗ್ಗಟ್ಟಾಗಿ ಕಲೆತು ಮುಂದಿನ ಪೀಳಿಗೆಗೆ ನಮ್ಮತನ ಸಂರಕ್ಷಿಸಬೇಕು ಎಂದು ಹೇಳಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ನವರಾತ್ರಿಯು ಮೈಸೂರು ಪರಂಪರೆಯಲ್ಲಿ ಅತ್ಯಂತ ಮಹತ್ವದ ಆಚರಣೆ. ದಸರಾ ಗೊಂಬೆ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ಇದೆ ಎಂದರು.
ಗೊಂಬೆಗಳನ್ನು ಲಕ್ಷ್ಮೀ-ನಾರಾಯಣ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಪುರಾಣ -ಪುಣ್ಯಕಥೆಗಳನ್ನು ಗೊಂಬೆಗಳ ಮೂಲಕ ರೂಪಕವಾಗಿ ಪ್ರಚುರಪಡಿಸಲಾಗುತ್ತದೆ. ಮುಂದಿನ ಪೀಳಿಗೆಗೆ ಸಂಸ್ಕೃತಿ ಪರಿಚಯಿಸುವುದೇ ಗೊಂಬೆ ಇಡುವ ಸಂಪ್ರದಾಯದ ಮೂಲ ಉದ್ದೇಶ. ಮೈಸೂರಿನ ಮನೆ ಮನೆಗಳಲ್ಲಿ ಗೊಂಬೆ ಕೂರಿಸುವ ಮೂಲಕ ಮಾತೆಯರು ಪರಂಪರೆ ರಕ್ಷಕರಾಗಿದ್ದಾರೆ ಎಂದರು
ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್‌ಕುಮಾರ್ ಮಾತನಾಡಿ, ಇಂತಹ ಸ್ಪರ್ಧೆಗಳಲ್ಲಿ ಗೃಹಿಣಿಯರು ಭಾಗವಹಿಸುವುದು ನಮ್ಮ ಸಂಸ್ಕಾರ, ಸಂಸ್ಕೃತಿ ಹಾಗೂ ಮೈಸೂರಿನ ಹಿರಿಮೆ ಹೆಚ್ಚಿಸುತ್ತದೆ ಎಂದರು.
ಶ್ರೀದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಜೀವಧಾರಾ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ, ಎನ್‌ಐಇ ಕಾಲೇಜಿನ ಪ್ರಾಧ್ಯಾಪಕಿ ಡಾ.ಸಿ.ಕೆ.ವನಮಾಲಾ, ಅಂಬಾಭವಾನಿ ಸಮಾಜ ಮಹಿಳಾ ಘಟಕ ಅಧ್ಯಕ್ಷ ಸವಿತಾ ಘಾಟ್ಕೆ , ಗ್ರಾಜುಯೇಟ್ಸ್ ಕೋ- ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ವರಲಕ್ಷ್ಮೀ ಅಜಯ್, ಚಕ್ರಪಾಣಿ, ಮಹಾನ್ ಶ್ರೇಯಸ್, ಜಯಶ್ರೀ ಶಿವರಾಂ ಇತರರು ಇದ್ದರು.