

ಮದ್ದೂರು: ಪಟ್ಟಣದಲ್ಲಿ ನಡೆಯುತ್ತಿರುವ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮನ ದನಗಳ ಜಾತ್ರೆಗೆ ಪುರಸಭಾ ಸದಸ್ಯೆ ಪ್ರಿಯಾಂಕಾ ಅಪ್ಪುಗೌಡ ಸ್ವಂತ ಹಣದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ದನಗಳ ಜಾತ್ರೆಗೆ ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿರಲಿಲ್ಲ. ಇದರಿಂದ ರೈತರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು.
ಜಾತ್ರೆಯಲ್ಲಿರುವ ನೀರಿನ ಸಮಸ್ಯೆಯನ್ನು ಮನಗಂಡ ಪ್ರಿಯಾಂಕಾ ಅಪ್ಪುಗೌಡ, 4 ದಿನಗಳಿಂದ ಸ್ವಂತ ಹಣದಲ್ಲಿ ಬೆಳಗ್ಗೆ ಹಾಗೂ ಸಂಜೆ 2 ಟ್ಯಾಂಕರ್‌ನಲ್ಲಿ ಸ್ವತಃ ತಾವೇ ನಿಂತು ನೀರು ಪೂರೈಕೆ ಮಾಡುವ ಮೂಲಕ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ.
ಮಳೆ ಇಲ್ಲದೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬರಗಾಲ ಆವರಿಸಿದೆ. ಕೆ.ಆರ್.ಎಸ್.ನಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸದ ಪರಿಣಾಮ ದನಗಳ ಜಾತ್ರೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಈ ಸಂಬಂಧ ರೈತರು ನನ್ನ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಪ್ರಿಯಾಂಕಾ ತಿಳಿಸಿದರು.