ಜೈನರಿಂದ ಸಮಾಜಮುಖಿ ಕಾರ್ಯ: ಡಿ.ಸುರೇಂದ್ರಕುಮಾರ್

2
Published on

ಮೈಸೂರು: ನೀನು ಬದುಕು, ಉಳಿದವರನ್ನೂ ಬದುಕಲು ಬಿಡು ಎನ್ನುವ ಜೈನಧರ್ಮದ ಧ್ಯೇಯದ ಹಿನ್ನೆಲೆಯಲ್ಲಿ ಸಮಾಜದ ವತಿಯಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ ಎಂದು ಎಸ್‌ಡಿಎಂ ವಿದ್ಯಾಸಂಸ್ಥೆಗಳ ಸಮೂಹದ ಉಪಾಧ್ಯಕ್ಷ ಡಿ.ಸುರೇಂದ್ರಕುಮಾರ್ ಹೇಳಿದರು.


ಹಂಪಿ ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ ಸಂಸ್ಕೃತಿ ಕೇಂದ್ರ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯ ಸಹಯೋಗದಲ್ಲಿ ನಗರದ ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಜೈನಧರ್ಮ; ಸಮಾಜಮುಖಿ ಚಿಂತನೆಗಳು’ ರಾಷ್ಟ್ರ ಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.


ರಾಜ್ಯದಲ್ಲಿ 250ಕ್ಕೂ ಹೆಚ್ಚು ದೇವಾಲಯ ಹಾಗೂ ಬಸದಿಗಳನ್ನು ಪುನರುಜ್ಜೀವನ ಗೊಳಿಸಿರುವುದಷ್ಟೇ ಅಲ್ಲದೇ, ಅವು ಮೂಲ ರೂಪದಲ್ಲಿ ಹೇಗೆ ಇದ್ದವೋ ಅದೇ ರೀತಿ ಪುನರ್ ನಿರ್ಮಾಣ ಮಾಡಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸುಮಾರು 50 ಲಕ್ಷ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ ಎಂದು ಅವರು ತಿಳಿಸಿದರು.

ಕಾಳು ಮೆಣಸಿನ ರಾಣಿ ಎಂದೇ ಖ್ಯಾತಿಯಾಗಿರುವ ಅಪ್ರತಿಮ ಹೋರಾಟಗಾರ್ತಿ, ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿ ರಾಜ್ಯಭಾರ ಮಾಡಿದ ಗೇರುಸೊಪ್ಪದ ಚನ್ನಭೈರಾದೇವಿ ಸ್ಮಾರಕವನ್ನು ಕಾರವಾರದ ಬಳಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಜಾಗಬೇಕೆಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸರ್ಕಾರಕ್ಕೆ ಮಾಡಿದ ಮನವಿಗೆ 10 ಎಕರೆ ಜಮೀನು ಮಂಜೂರಾಗಿದೆ. ಸ್ಮಾರಕದಲ್ಲಿ ರಾಣಿಯ ಶೌರ್ಯ-ಪರಾಕ್ರಮ, ಆಕೆಯ ಜೀವನಗಾಥೆ ಕುರಿತ ವರ್ಣಚಿತ್ರ, ಸಾಹಿತ್ಯ ಮತ್ತು ದಾಖಲೆಗಳನ್ನು ಇಡಲಾಗುತ್ತದೆ.-ಡಿ.ಸುರೇಂದ್ರಕುಮಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net