

ದೇವದುರ್ಗ: ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ ಕೋಟೆ ಹೇಳಿದರು.
ಪಟ್ಟಣದ ಜ್ಞಾನವೃಕ್ಷ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ಮಲದಕಲ್ ಗೆಳೆಯರ ಬಳಗ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳ ಉಚಿತ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಪಡೆದುಕೊಂಡು ಉತ್ತಮ ಸಾಧನೆ ಮಾಡಬೇಕು. ಗುರುಗಳಿಗೆ ವಿಧೇಯರಾಗಿರಬೇಕು. ನಿರಂತರ ಪ್ರಯತ್ನ, ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಟ್ಟು ಓದುವುದರಿಂದ ಉನ್ನತ ಹುದ್ದೆ ಪಡೆಯಬಹುದು ಎಂದರು.
ಎಲ್.ವಿ.ಬಸವರಾಜ, ಶೇಖರಯ್ಯ, ಸುರೇಶ, ಮೀನಾಕ್ಷಿ, ಪರಮಾನಂದ, ವಿಜಯಲಕ್ಷ್ಮೀ, ರಾಜೇಂದ್ರ ಪ್ರಸಾದ್, ಬಸವಲಿಂಗ ಕರಿಗಾರ ಅವರಿಗೆ 2023-24ನೇ ಸಾಲಿನ ಸಮಾಜಮುಖಿ ಶಿಕ್ಷಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀಬಸವದೇವರು ಅರಿವಿನ ಮನೆ ಸಾನ್ನಿಧ್ಯವಹಿಸಿದ್ದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಂದೋಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ಬಿ, ಪ್ರಭಾವತಿ ಪ್ರಾಣೇಶ, ಪ್ರಾಧ್ಯಾಪಕ ಡಾ.ಮಾರುತಿ ಕುಮಾರ ನಾಯಕ, ಕೆ.ವಿನೋದ ಕುಮಾರ ಹಿರೇಬೂದೂರು, ನಾಗರಾಜ ಪೂಜಾರಿ, ಷಣ್ಮುಖ ಹೂಗಾರ ಇತರರಿದ್ದರು.