

ಆಲೂರು : ಸಾಮಾಜಿಕ ಮೌಲ್ಯಗಳು ಮತ್ತು ಸಮಯಪ್ರಜ್ಞೆ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ಹೇಳಿದರು.
ಆಲೂರು ತಾಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ವತಿಯಿಂದ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ 2024-25 ನೇ ಸಾಲಿನ ಕಬ್ ಮಾಸ್ಟರ್, ಫ್ಲಾಕ್ ಲೀರ್ಸ್, ಸ್ಕೌಟ್ ಮಾಸ್ಟರ್, ಹಾಗೂ ಗೈಡ್ ಕ್ಯಾಪ್ಟನ್ ಗಳಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಸಮಾವೇಶ ಹಾಗೂ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾಜಿಕ ಮೌಲ್ಯಗಳ ಅಧಃಪತನದಿಂದ ಅರಾಜಕತೆ ಉಂಟಾಗುತ್ತಿದೆ. ಸುಸ್ಥಿರ ಸಮಾಜ ನಿರ್ಮಾಣದ ಹಿನ್ನೆಲೆಯಲ್ಲಿ ಸಾಮಾಜಿಕ, ನೈತಿಕ, ಸಾಂಸ್ಕೃತಿಕ ಮೌಲ್ಯಗಳು ಬಹಳ ಮಹತ್ವ ಪಡೆಯುತ್ತವೆ. ಮೌಲ್ಯಗಳ ಜತೆಜತೆಗೆ ಸಮಯಪ್ರಜ್ಞೆಯೂ ಸಹ ಅತ್ಯಂತ ಮಹತ್ವವಾದದ್ದು, ಮೌಲ್ಯಗಳನ್ನು ಬಿತ್ತುವವರೂ ಹಾಗೂ ವೇದಿಕೆಗಳಲ್ಲಿ ಮೌಲ್ಯಗಳ ಬಗ್ಗೆ ಮಾತನಾಡುವವರು ಮೊದಲು ಬದ್ಧರಾಗಿರಬೇಕು ಎಂದು ಸಲಹೆ ನೀಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್.ವೀರಭದ್ರಪ್ಪ, ಹಿರಿಯ ಗೈಡರ್ ಎಚ್.ಜಿ.ಕಾಂಚನಾಮಾಲಾ ಮಾತನಾಡಿದರು. ಮಾತನಾಡಿದರು. ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ 2023-24 ನೇ ಸಾಲಿನ ಕಾರ್ಯಕ್ರಮ ವರದಿ ಹಾಗೂ ಆಯ-ವ್ಯಯ ಮಂಡನೆ ಮಾಡಿ ಅನುಮೋದನೆ ಪಡೆದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಸಹಾಯಕ ಆಯುಕ್ತೆ ಎಚ್.ಎಂ.ಪ್ರಿಯಾಂಕಾ, ಆಲೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗೋವಿಂದೇಗೌಡ, ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ಜಿಲ್ಲಾ ಖಜಾಂಚಿ ರಮೇಶ್, ಬಿ.ಆರ್.ಪಿ.ಪ್ರಮೀಳಾ, ಭೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಂ.ಎಲ್.ಎಲಿಜೆಬೆತ್ ಇತರರು ಇದ್ದರು.