

ಮಡಿಕೇರಿ: ಕನ್ನಡ ಭಾಷಾ ಬೋಧಕರು ಕೇವಲ ಬೋಧಕರಲ್ಲ. ಅವರು ಸಮಾಜವನ್ನು ತಿದ್ದುವ ರಾಯಭಾರಿಗಳು. ವಿದ್ಯಾರ್ಥಿಗಳಲ್ಲಿ ಅವರು ಸಾಹಿತ್ಯದ ಮೂಲಕ ಸಾಮಾಜಿಕ ಮೌಲ್ಯಗಳನ್ನು ಬಿತ್ತಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್ ತಿಳಿಸಿದರು.
ದಲಿತ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕವು ಇಲ್ಲಿನ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಸಭಾಂಗಣದಲ್ಲಿ ಕನ್ನಡ ಭಾಷಾ ಬೋಧಕರಿಗಾಗಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭಾವನಾಜೀವಿಗಳೂ ಆಗಿರುವ ಅವರು ಸೋಮಾರಿತನ ತೋರದೇ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಗೈಡ್ ಮೇಲೆ ಅವಲಂಭಿತರಾಗದೇ ಪಠ್ಯವನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.
ಕನ್ನಡ ಸಾಹಿತ್ಯದಲ್ಲಿ ಪರಿವರ್ತನೆಯ ಹೆಗ್ಗುರುತುಗಳು ವಿಷಯ ಕುರಿತು ಸುದೀರ್ಘ ಉಪನ್ಯಾಸ ನೀಡಿದ ಅವರು, ಪಂಪ ಹೇಳಿದ ಮನುಷ್ಯಜಾತಿ ತಾನೊಂದೆ ವಲಂ ಮಾತಿನಿಂದ ಹಿಡಿದು ದೇವನೂರ ಮಹಾದೇವ ಅವರ ಸಂಬಂಜ ಎನ್ನುವುದು ದೊಡ್ಡದು ಕಣಾ ಎಂಬ ಮಾತಿನವರೆಗೆ ಅನೇಕ ಕವಿವಾಣಿಗಳನ್ನು ಉಲ್ಲೇಖಿಸಿ ಗಮನ ಸೆಳೆದರು. ಇದು ಕೇವಲ ಮನುಷ್ಯ ಕೇಂದ್ರೀತ ಕಾಲಘಟ್ಟವಲ್ಲ. ಇದು ಜೀವಕೇಂದ್ರಿತ ಕಾಲಘಟ್ಟ ಎಂಬ ಮಾತನ್ನು ಪ್ರತಿಪಾದಿಸಿ, ಕಾಲಾತೀತವಾದ ಸತ್ಯಗಳನ್ನು ಪ್ರತಿಪಾದಿಸಿದ ಕವಿಗಳ ನುಡಿಗಳನ್ನು ಉದಾಹರಿಸಿದರು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಅವರು ಸಹಿ ಹಾಕುವ ಮೂಲಕ ದಲಿತ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅರಿವು, ಆಚಾರ, ಅನುಭಾವಗಳ ರೂಪಕ. ಸಂವಿಧಾನದ ಸೌಲಭ್ಯಗಳು ನನಗೊಬ್ಬನಿಗೆ ಮಾತ್ರ ಸಿಕ್ಕರೆ ಸಾಲದು. ಅದು ಎಲ್ಲರಿಗೂ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಮಾಡಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ ಎಂಬ ಬಸವಣ್ಣನವರ ವಚನದ ಸಾಲುಗಳನ್ನು ಉಲ್ಲೇಖಿಸಿದ ಅವರು, ದಲಿತ ಸಾಹಿತ್ಯ ಪರಿಷತ್ತು ಎಂಬ ವೇದಿಕೆಯನ್ನು ಬಳಸಿಕೊಂಡು ಸಮಾಜದಲ್ಲಿ ಸಮಾನತೆ ತರಲು ಎಲ್ಲರೂ ಶ್ರಮಿಸಬೇಕು ಎಂದರು.
ದಲಿತ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ್ ಮೌರ್ಯ ಮಾತನಾಡಿ, ದಲಿತ ಸಾಹಿತ್ಯ ಕೇವಲ ಒಂದು ವರ್ಗದ ಸಾಹಿತ್ಯ ಅಲ್ಲ. ಅದು ಬಹುತ್ವದ ಸಾಹಿತ್ಯ ಎಂದರು.
ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ್ ಗೋಳಸಂಗಿ ಮಾತನಾಡಿ, ಡಿಸೆಂಬರ್‌ನಲ್ಲಿ ದಲಿತ ಸಾಹಿತ್ಯ ಸಮ್ಮೇಳನವು ರಾಯಚೂರಿನಲ್ಲಿ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆದಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ದಲಿತ ಪ್ರಜ್ಞೆ ಬಹಳ ಮುಖ್ಯ. ದಲಿತರ ಬಗ್ಗೆ ಕಳಕಳಿ ಇರುವ ಎಲ್ಲರೂ ಸೇರಿ ಶ್ರಮಿಸಬೇಕು. ಯುವಪೀಳಿಗೆ ಸಾಹಿತ್ಯದತ್ತ ಮುಖಮಾಡಬೇಕು ಎಂದರು.
ಹಲವು ಕ್ರಾಂತಿಗೀತೆಗಳು ಕಾರ್ಯಕ್ರಮಕ್ಕೆ ಮೆರುಗು ತುಂಬಿದವು. ಪರಿಷತ್ತಿನ ಮೈಸೂರು ವಿಭಾಗೀಯ ಸಂಯೋಜಕ ಚಂದ್ರಗುಪ್ತ, ರಾಜ್ಯ ಕಾರ್ಯದರ್ಶಿ ಸುಭಾಷ್ ಹೊದ್ಲುರು, ನಗರಸಭೆಯ ಮಾಜಿ ಅಧ್ಯಕ್ಷ ಎಚ್.ಎಂ.ನಂದಕುಮಾರ್, ಪರಿವರ್ತನಾ ಚಳವಳಿಯ ಮೋಹನ್ ಮೌರ್ಯ ಭಾಗವಹಿಸಿದ್ದರು.