ಸಾಮಾಜಿಕ ಚಿಂತನೆ ಪ್ರೇರೇಪಿಸುವ ಮನುಜಸ್ಮತಿ

4
Published on

ಮೈಸೂರು: ಮನುಜಸ್ಮತಿ ಕೃತಿಯು ಸಾಮಾಜಿಕ ಚಿಂತನೆಯನ್ನು ಪ್ರೇರೇಪಿಸುತ್ತದೆ ಎಂದು ಖ್ಯಾತ ವಿಮರ್ಶಕ ಎಸ್.ಆರ್. ವಿಜಯಶಂಕರ್ ವ್ಯಾಖ್ಯಾನಿಸಿದರು.

ಸಹಜಾ ಪ್ರಕಾಶನ ಮತ್ತು ಬದುಕು ಟ್ರಸ್ಟ್ ವತಿಯಿಂದ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಕೆ.ಪಿ. ಮಹಾದೇವಯ್ಯ ಅವರ ಮನುಜಸ್ಮತಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಕೃತಿ ಕುರಿತು ಮಾತನಾಡಿದರು.

ಮನುಸ್ಮತಿಗೆ ವಿರುದ್ಧವಾದ ಮನುಜಸ್ಮತಿ ಭಿನ್ನವಾದ ಮೀಮಾಂಸೆ ಪರಿಕಲ್ಪನೆಯನ್ನು ಹೇಳುತ್ತದೆ. ಧ್ಯಾನದೀಪದಂತಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರವಾದದ ಸಮಾನತೆಯ ಕಲ್ಪನೆ ಈ ಕೃತಿಯ ಹಿಂದಿದೆ ಎಂದರು.
ಅಂಬೇಡ್ಕರ್ ಅವರ ಕಳಕಳಿ, ಸಮಾನತೆ, ಆರ್ಥಿಕ ಸ್ವಾತಂತ್ರೃ ಮನುಷ್ಯತ್ವ ಮೊದಲಾದ ದಾಖಲೆಯ ಗುಣಗಳಿವೆ. ಡಾ.ಕೆ.ಪಿ. ಮಹಾದೇವಯ್ಯ ಅವರ ಪ್ರಜ್ಞಾವಂತ ಕವಿಯ ಮನಸ್ಸು ಇಲ್ಲಿ ಕೆಲಸ ಮಾಡಿದೆ ಎಂದು ಅವರು ಶ್ಲಾಘಿಸಿದರು.


ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಈ ಕೃತಿ ಪ್ರಸ್ತುತ ವಿದ್ಯಮಾನಗಳಿಗೆ ಹಿಡಿದ ಕನ್ನಡಿ. ಜಾತಿ ದೌರ್ಜನ್ಯ, ಮರ್ಯಾದಾ ಹತ್ಯೆ, ನೋವು, ವಿಷಾದ, ಪ್ರೀತಿ, ಸಮಾನತೆ- ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ಇಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು ರೀತಿಯಲ್ಲಿ ಚಿಂತನೆಗೆ ಹಚ್ಚುವ ಪಂಚಿಂಗ್ ಡೈಲಾಗ್‌ಗಳಿವೆ ಎಂದರು.
ಸುಭಾಷಿತ ಮಾದರಿಯ ಈ ದಿನವಾಣಿಗಳು ಮಾನವತೆ, ವೈಚಾರಿಕತೆ, ವೈಜ್ಞಾನಿಕತೆಯ ಜಾಗೃತಿ ಮೂಡಿಸುತ್ತವೆ. ನೀತಿಪಾಠ ಹೇಳುತ್ತವೆ ಎಂದರು.

ಕೃತಿ ಲೋಕಾರ್ಪಣೆ ಮಾಡಿದ ಪ್ರಗತಿಪರ ಚಿಂತಕ ಈ. ಧನಂಜಯ ಎಲಿಯೂರು ಮಾತನಾಡಿ, ಡಾ.ಕೆ.ಪಿ. ಮಹಾದೇವಯ್ಯ ಅವರ ಮಾತುಗಳು ನಮ್ಮನ್ನು ಹಿಡಿದು ನಿಲ್ಲಿಸುತ್ತವೆ. ನಮ್ಮದೇ ಮಾತುಗಳು ಎನಿಸುತ್ತವೆ. ವಿಡಂಬನೆಯ ಮೂಲಕವೇ ಎಚ್ಚರಿಸುತ್ತವೆ ಎಂದರು. ಮಹಾದೇವಯ್ಯ ಅವರು ಯಾರನ್ನೂ ವಿಮರ್ಶಿಸದೇ ಬಿಟ್ಟಿಲ್ಲ. ಎಲ್ಲವನ್ನೂ ವಿಮರ್ಶೆ ಮಾಡಿಯೇ ಒಪ್ಪುತ್ತಾರೆ. ಸರಿ ಇಲ್ಲದಿದ್ದಲ್ಲಿ ಯಾವುದನ್ನೂ, ಯಾರನ್ನೂ ಒಪ್ಪುವುದಿಲ್ಲ ಎಂದು ಹೇಳಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಎನ್.ಕೆ. ಲೋಲಾಕ್ಷಿ ಮಾತನಾಡಿ, ಕೈಪಿಡಿಯಂತಿರುವ ಈ ಕೃತಿ ನಮ್ಮ ಸಂವಿಧಾನದಂತೆ ಎಲ್ಲರನ್ನೂ ಒಳಗೊಳ್ಳುತ್ತದೆ. ಬದುಕುವ ರೀತಿಯನ್ನು ಕಲಿಸುತ್ತದೆ ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ದಲಿತ ಚಳವಳಿಕಾರರನ್ನೂ ಟೀಕಿಸುವ ಮೂಲಕ ಎಚ್ಚರಿಸುವಂತಹ ಕೆಲಸವನ್ನು ಇಲ್ಲಿ ಡಾ.ಕೆ.ಪಿ. ಮಹಾದೇವಯ್ಯ ಮಾಡಿದ್ದಾರೆ. ಶ್ರೀಕೃಷ್ಣ, ಶ್ರೀರಾಮ ಅಗ್ರಹಾರದಿಂದ ಬಂದವರಲ್ಲ. ಆದರೂ ಅವರನ್ನು ತಮ್ಮವರಾಗಿ ಮಾಡಿಕೊಂಡು ಮಾರ್ಕೆಟ್ ಮಾಡುತ್ತಿದ್ದಾರೆ. ಉಡುಪಿಯಲ್ಲಿ ಶ್ರೀಕೃಷ್ಣ ಒಳಗಿದ್ದರೆ, ಕನಕ ಇನ್ನೂ ಹೊರಗೇ ಇದ್ದಾನೆ. ಸಂಘರ್ಷದ ಕಾಲಘಟ್ಟದಲ್ಲಿ ಸಮಾಜವನ್ನು ಬಡಿದೆಬ್ಬಿಸುವ ಕೆಲಸ ಆಗಬೇಕಾಗಿದೆ ಎಂದರು.

ಸಮಾಜದಲ್ಲಿ ಮತೀಯವಾದ ತಲೆ ಎತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಆತ್ಮಶೋಧನೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net