

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕೈವಾರ ತಾತಯ್ಯ (ಶ್ರೀ ಯೋಗಿನಾರೇಯಣ ಯತೀಂದ್ರ) ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಶಿವಶರಣ, ದಾಸ ಪರಂಪರೆ ಹಾಗೂ ಭಕ್ತಿ ಚಳವಳಿಗಳ ಆಧ್ಯಾತ್ಮಿಕರ ಸಾಲಿಗೆ ಸೇರಿದ ಕೈವಾರ ತಾತಯ್ಯ, ಸಮಾಜದಿಂದ ಸಾಕಷ್ಟು ಕೊಡುಗೆ ಪಡೆಯುವ ಮಾನವರು ಅದನ್ನು ಸಮಾಜಕ್ಕೆ ಮರಳಿಸಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂಬ ಉತ್ತಮ ಸಂದೇಶ ಸಾರಿದ ಸಂತ ಎಂದು ಬಣ್ಣಿಸಿದರು.
ಕ್ರಿ.ಶ. 1726ರಲ್ಲಿ ಜನಿಸಿ, ಆಧ್ಯಾತ್ಮ್ಮಿಕ ಭಾವನೆ ಜಾಗೃತಗೊಂಡ ನಂತರ ಸಂಸಾರಿಕ ಜೀವನ ತೊರೆದರು. 110 ವರ್ಷ ಸಾರ್ಥಕ ಬದುಕು ಸಾಗಿಸಿದ ಅವರು 1836 ರಲ್ಲಿ ಕೈವಾರದಲ್ಲಿ ಜೀವಂತ ಸಮಾಧಿಯಾದರು. ಅಂದಿನಿಂದ ಕೈವಾರ ತಾತಯ್ಯ ಎಂದೇ ಜನಮಾನಸದಲ್ಲಿ ಪ್ರಸಿದ್ಧಿಯಾದರು ಎಂದು ಸ್ಮರಿಸಿಕೊಂಡರು.
ತೆಲುಗು ಸೇರಿ ಕನ್ನಡದಲ್ಲಿ ಸುಲಲಿತ ಹಾಗೂ ಸುಂದರವಾದ ಹಲವು ಕೃತಿ ರಚಿಸಿದ್ದಾರೆ. ವೇದಾಂತ ಸಾರಾವಳಿ, ನಾದಬ್ರಹ್ಮಾನಂದ ನಾರೇಯಣ ಕವಿ ತ್ರಿಶತಕ, ಅಮರ ನಾರಾಯಣ ಕವಿ ಶತಕ, ವೀವಲಿಂಗ ಶತಕ, ತಾರಕ ಬ್ರಹ್ಮಾನಂದ ಶತಕ, ಶ್ರೀಕೃಷ್ಣ ಚರಿತ, ತತ್ವಾಮೃತ, ಸಿದ್ಧಾಂತ ಯೋಗಸಾರ, ಕಾಲಜ್ಞಾನ, ಆತ್ಮಬೋಧಾಮೃತ ಪ್ರಮುಖವಾದವು. ಕನ್ನಡದಲ್ಲಿ ಅವರ ರಚನೆಯ ನಾಲ್ಕು ಹಾಗೂ ಐದು ಸಾಲಿನ ಹಲವು ಪದ್ಯಗಳು ಲಭಿಸಿವೆ ಎಂದರು.
ಉಪನ್ಯಾಸಕಿ ಯಶೋದಾ ರಾಜಶೇಖರಪ್ಪ ಮಾತನಾಡಿ, ಭಾರತಕ್ಕೆ ಬಹುದೊಡ್ಡ ಸಂತ ಪರಂಪರೆಯಿದೆ. ಕೈವಾರ ತಾತಯ್ಯ ಬಲಿಜ ಜನಾಂಗದ ಸಾಂಸ್ಕೃತಿಕ ಪುರುಷ, ಭೂತ, ಭವಿಷ್ಯ ಕಾಲ ಬಲ್ಲ ಮಹಾಯೋಗಿ ಆಗಿದ್ದರು. ಮಾನವ ಕುಲದ ಲೋಕಕಲ್ಯಾಣದ ಚಿಂತನೆ ಹೊಂದಿದ್ದ ದಾರ್ಶನಿಕ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಶ್ರೀ ಯೋಗಿನಾರೇಯಣ ಯತೀಂದ್ರ ಬಲಿಜ ಸಂಘದ ಅಧ್ಯಕ್ಷ ಎಂ.ಎ.ಸೇತುರಾಮ್, ಕಾರ‌್ಯದರ್ಶಿಗಳಾದ ಎಂ.ಗಂಗಣ್ಣ, ಸಿ.ಎಚ್.ಬಸವರಾಜ, ತಾಲೂಕು ಅಧ್ಯಕ್ಷ ಎಂ.ಸತ್ಯನಾರಾಯಣ, ಸಮಾಜದ ಮುಖಂಡರಾದ ವಿರೂಪಾಕ್ಷಪ್ಪ, ನಂಜುಂಡಸ್ವಾಮಿ, ರಾಘವೇಂದ್ರ, ರಂಗ ಕಲಾವಿದ ಕೆ.ಪಿ.ಎಂ.ಗಣೇಶಯ್ಯ, ಹಿಮಂತರಾಜು ಇತರರಿದ್ದರು.
ಭವ್ಯ ಮೆರವಣಿಗೆ
ನಗರದ ನೀಲಕಂಠೇಶ್ವರ ಸ್ವಾಮಿ ದೇಗುಲ ಮುಂಭಾಗದಿಂದ ಮೆರವಣಿಗೆಗೆ ಚಾಲನೆ ದೊರೆಯಿತು. ಗಾಂಧಿ, ಎಸ್‌ಬಿಐ, ಒನಕೆ ಓಬವ್ವ ಹಾಗೂ ಮದಕರಿನಾಯಕ ವೃತ್ತದ ಮಾರ್ಗವಾಗಿ ಸಂಚರಿಸಿ ತರಾಸು ರಂಗಮಂದಿರ ತಲುಪಿತು. ಕೈವಾರ ತಾತಯ್ಯ, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿ ಪುಲೆ ಭಾವಚಿತ್ರಗಳು ಮೆರವಣಿಗೆಯಲ್ಲಿದ್ದವು.