

ಮಂಡ್ಯ: ಗ್ರಾಮ ಸೇವಕರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಎಂ.ಶಿವಲಿಂಗಯ್ಯ ಅವರ ಹೆಸರಿನಲ್ಲಿ ಕರ್ನಾಟಕ ಸಂಘದಿಂದ ಕೊಡಮಾಡುವ ಸಮಾಜಸೇವಾ ಪ್ರಶಸ್ತಿಗೆ ಶ್ರೀರಂಗಪಟ್ಟಣದ ಖ್ಯಾತ ವೈದ್ಯ ಡಾ.ಬಿ.ಸುಜಯಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಮೂರನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ.14ರಂದು ಸಂಜೆ 6 ಗಂಟೆಗೆ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ. ಪುರಸ್ಕೃತರಿಗೆ ಪ್ರಶಸ್ತಿ ಜತೆಗೆ 10 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ.ಶ್ರೀನಿವಾಸ್ ವಹಿಸಲಿದ್ದು, ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದತ್ತಿದಾನಿ ಎಂ.ಕೆ.ಲಕ್ಷ್ಮೀ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ನಾಯಕತ್ವದ ಕೊರತೆ: ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದರಿಂದ ರೈತರಿಗೆ ಅನ್ಯಾಯವಾಗಲಿದೆ. ಆದರೆ, ಇದನ್ನು ತಡೆಯಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಪ್ರೊ.ಜಯಪ್ರಕಾಶಗೌಡ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಒಗ್ಗಟ್ಟಿನ ಕೊರತೆ ಇದೆ. ಎಲ್ಲ ಪಕ್ಷದ ನಾಯಕರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನಹರಿಸುತ್ತಿಲ್ಲ. ಹಾಸನ, ಶಿವಮೊಗ್ಗ ಜಿಲ್ಲೆಗೆ ಹೋಲಿಸಿದರೆ ಅಭಿವೃದ್ಧಿಯ ಕೊರತೆಯನ್ನು ಮಂಡ್ಯದಲ್ಲಿ ಕಾಣಬಹುದು. ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಕಾಲದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಜತೆಗೆ ರಾಜಕಾರಣಿಗಳು ಒಬ್ಬರಿಗೊಬ್ಬರು ಗೌರವ ಕೊಡುತ್ತಿದ್ದರು. ಆದರೆ, ಇಂದು ಆ ಪರಿಸ್ಥಿತಿ ಇಲ್ಲ. ಜಿಲ್ಲಾ ಮಟ್ಟದ ನಾಯಕತ್ವದ ಕೊರತೆ ಕಂಡುಬರುತ್ತಿದೆ. ಈ ದೌರ್ಬಲ್ಯವನ್ನು ಬಳಸಿಕೊಂಡು ಕೆಲವರು ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದರು.