

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿಯ ಭಾರತೀಯ ವೈದ್ಯಕಿಯ ಸಂಸ್ಥೆಯ(ಐಎಂಎ) ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ಜರುಗಿತು.
ಧಾರವಾಡ ಐಎಂಎ ಶಾಖೆ ಅಧ್ಯಕ್ಷರಾಗಿ ಡಾ. ನವೀನ ಮಂಕಣಿ ಅಧಿಕಾರ ಸ್ವೀಕರಿಸಿ ಮಾತನಾಡಿ, ವೈದ್ಯರಲ್ಲಿ ಏಕತೆ ಇರಬೇಕು. ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅಂದಾಗ ಮಾತ್ರ ವೈದ್ಯ ವೃತ್ತಿಗೆ ಗೌರವ ತನ್ನಿಂದ ತಾನೇ ಪ್ರಾಪ್ತವಾಗುತ್ತದೆ. ನಮ್ಮ ಕಾಲಾವಧಿಯಲ್ಲಿ ಆದಷ್ಟು ಸಮಾಜ ಸೇವೆಗೆ ಮುಂದಾಗುತ್ತೇವೆ ಎಂದು ವಾಗ್ದಾನ ಮಾಡಿದರು.
ಕೆಎಂಸಿ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ಮಾತನಾಡಿ, ವೈದ್ಯರು ಯಾವಾಗಲೂ ಸಮಾಜಮುಖಿ ಕೆಲಸ ಮಾಡುತ್ತಿರುತ್ತಾರೆ. ವೃತ್ತಿ ಬದ್ಧತೆ ಹೆಚ್ಚಿಗೆ ತೋರುತ್ತಾರೆ. ಇದರ ಜತೆಗೆ ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಬದುಕಿನತ್ತ ಹೆಚ್ಚು ಗಮನ ಕೊಡಬೇಕು ಎಂದ ಅವರು, ಕೆಎಂಸಿ ಸಾಮಾಜಿಕ ಭದ್ರತೆ ಹಾಗೂ ಪಿಪಿಎಸ್ ಯೋಜನೆ ಬಗ್ಗೆ ವಿವರಿಸಿದರು.
ಕಾರ್ಯದರ್ಶಿಯಾಗಿ ಡಾ. ಸುಹಾಸ ಎಚ್., ಖಜಾಂಚಿಯಾಗಿ ಡಾ. ಸಪನ್ ಡಿ.ಎಸ್. ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ. ಸತೀಶ ಇರಕಲ್, ಕಾರ್ಯದರ್ಶಿ ಡಾ. ಕಿರಣ ಕುಲಕರ್ಣಿ, ಡಾ. ಸುಧೀರ ಜಂಬಗಿ, ಮಹಿಳಾ ವೈದ್ಯರ ವಿಭಾಗದ ಅಧ್ಯಕ್ಷೆ ಡಾ. ಕವಿತಾ ಮಂಕಣಿ, ಡಾ. ಲಕ್ಕೋಳ, ಡಾ. ಮಧುಸೂದನ ಕೆ., ಡಾ. ವಿ.ಆರ್. ಸೊರಗಾವಿ, ಡಾ. ಪವನ್ ಪಾಟೀಲ, ಡಾ. ಸಂತೋಷ ಪಾಟೀಲ, ಇತರರು ಇದ್ದರು.