ಲಯನ್ಸ್ ನಿಂದ ಸಮಾಜಮುಖಿ ಸೇವೆ

15 ckm 8
ಚಿಕ್ಕಮಗಳೂರಿನ ಲಯನ್ಸ್ ಸೇವಾ ಭವನದಲ್ಲಿ ಏರ್ಪಡಿಸಿದ್ದ ಲಯನ್ಸ್ ಸಂಸ್ಥಾಪನಾ ದಿನಾಚರಣೆಯನ್ನು ಕ್ಲಬ್ ಅಧ್ಯಕ್ಷ ರಮೇಶ್ ಉದ್ಘಾಟಿಸಿದರು.
Published on

ಚಿಕ್ಕಮಗಳೂರು: ಸಮಾಜಮುಖಿ ಸೇವಾ ಕಾರ್ಯಚಟುವಟಿಕೆಗಳ ಅನುಷ್ಠಾನದಲ್ಲಿ ಲಯನ್ಸ್ ಕ್ಲಬ್ ಇಡೀ ವಿಶ್ವದಲ್ಲೇ ಅಗ್ರಪಂಕ್ತಿಯಲ್ಲಿದೆ ಎಂದು ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಎಚ್.ಆರ್.ಹರೀಶ್ ತಿಳಿಸಿದರು.
ನಗರದ ಲಯನ್ಸ್ ಸೇವಾ ಭವನದಲ್ಲಿ ಲಯನ್ಸ್ ಕ್ಲಬ್‌ನಿಂದ ಏರ್ಪಡಿಸಿದ್ದ ಲಯನ್ಸ್ ಸಂಸ್ಥಾಪನಾ ದಿನಾಚರಣೆ ಮತ್ತು ಪೂರ್ವ ಲಯನ್ಸ್ ಅಧ್ಯಕ್ಷರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಡಾ.ಮೆಲ್ವಿನ್ ಜೋನ್ಸ್ ಅವರಿಂದ 1917ರಲ್ಲಿ ಆರಂಭಗೊಂಡ ಲಯನ್ಸ್ ಸೇವಾ ಸಂಸ್ಥೆ ವಿಶ್ವದ 210 ದೇಶಗಳಲ್ಲಿ ಅಸ್ತಿತ್ವದಲ್ಲಿದೆ. 48 ಸಾವಿರ ಲಯನ್ಸ್ ಕ್ಲಬ್‌ಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, 14 ಲಕ್ಷ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಸೇವೆಯನ್ನೇ ಪ್ರಮುಖ ಗುರಿಯಾಗಿಟ್ಟುಕೊಂಡು ಚಿಕ್ಕಮಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದ ಲಯನ್ಸ್ ಕ್ಲಬ್ ತನ್ನ 49 ವರ್ಷ ಪೂರೈಸಿದೆ. ಈ ವರ್ಷ ತನ್ನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂಸ್ಥೆ 50 ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸುವಲ್ಲಿ ಹಲವು ಹಿರಿಯರ ಪರಿಶ್ರಮ ಅಡಗಿದೆ. ಇಂತಹ ಸೇವಾ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಸಲು ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಮಾತನಾಡಿ, ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ವರ್ಷದಲ್ಲಿ ನಾನು ಅಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಕ್ಲಬ್ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಜತೆಗೆ ಹತ್ತು ಹಲವು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ವರ್ಷ ಯುವಜನತೆಗೆ ಪೂರಕ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net