

ಮಂಡ್ಯ: ವೈದ್ಯಕೀಯ ಕ್ಷೇತ್ರ ವ್ಯಾಪಾರೀಕರಣವಾಗುತ್ತಿರುವ ಸಂದರ್ಭದಲ್ಲಿ ಡಾ.ರಾಜೇಶ್ವರಿ ಅವರು ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅಪಾರ ತಾಳ್ಮೆಯಿಂದ ಉಪಚರಿಸಿ ಸರಳ ಔಷಧ ನೀಡಿ ಮನೆ ಮಾತಾಗಿದ್ದಾರೆ. ಇವರ ಸೇವೆ ಅಮೂಲ್ಯವಾದುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಶ್ಲಾಘಿಸಿದರು.
ಕರ್ನಾಟಕ ಸಂಘದ ವತಿಯಿಂದ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ 8ನೇ ವರ್ಷದ ಎಂ.ಶಿವಲಿಂಗಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜೇಶ್ವರಿ ಅವರು ತಂದೆ ಮತ್ತು ಮಾವ ನಡೆದ ಹಾದಿಯಲ್ಲಿ ಸಾಗಿ ಇಡೀ ಕೆ.ಆರ್.ಪೇಟೆ ತಾಲೂಕಿನಲ್ಲಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಸಲಹಾ ಶುಲ್ಕ 200 ರಿಂದ 300 ರೂ ಇರುವ ಸಂದರ್ಭದಲ್ಲಿ ಇವರು ಕೇವಲ 50 ರೂ.ಗೆ ಚಿಕಿತ್ಸೆ ಸಲಹೆ ನೀಡುತ್ತಿರುವುದು ಪ್ರಶಂಸನೀಯ ಎಂದರು.
ಎಂ.ಶಿವಲಿಂಗಯ್ಯ ಅವರು ಗ್ರಾಮ ಸಹಾಯಕರಾಗಿ ರೈತರ ನಿಸ್ವಾರ್ಥ ಸೇವೆ ಮಾಡುತ್ತಾ ಬಂದವರು. ಸ್ವಯಂ ನಿವೃತ್ತಿಯ ನಂತರವೂ ಸಹ ಜನರಿಗೆ ಬೇಕಾದ ಸೇವೆ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕವಾಗಿ ದುಡಿದವರು. ಸಮಾಜ ಸೇವಕ ಶಿವಲಿಂಗಯ್ಯ ಹೆಸರಿನ ಸಮಾಜಸೇವಾ ಪ್ರಶಸ್ತಿಯನ್ನು ವೈದ್ಯರಾದ ರಾಜೇಶ್ವರಿ ಅವರಿಗೆ ನೀಡುತ್ತಿರುವುದು ಅರ್ಥಪೂರ್ಣವಾಗಿದೆ ಹಾಗೂ ಪ್ರಶಸ್ತಿಯ ಗೌರವ ಹೆಚ್ಚಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೈದ್ಯೆ ಡಾ.ಎನ್.ಆರ್.ರಾಜೇಶ್ವರಿ, ತಾವು ಮಾಡಿರುವ ಮುಷ್ಟಿಯಷ್ಟು ಕೆಲಸಕ್ಕೆ ಇಷ್ಟು ದೊಡ್ಡ ಪ್ರಶಸ್ತಿ ನೀಡುತ್ತಿರುವುದು ಮುಜುಗರ ಉಂಟು ಮಾಡಿದೆ. ನಿಮ್ಮ ಅಭಿಮಾನವನ್ನು ಉಳಿಸಿಕೊಳ್ಳುವ ಭರವಸೆ ನೀಡುತ್ತೇನೆ. ನಮ್ಮ ತಾಯಿಯ ಪ್ರಯತ್ನದಿಂದ ವೈದ್ಯಳಾಗುವ ಅವಕಾಶ ಸಿಕ್ಕಿದ್ದು ಆಕಸ್ಮಿಕ. ಇದು ತಾಯಿಯ ಭಿಕ್ಷೆ ಎಂದು ಹೇಳಿದರೆ ತಪ್ಪಾಗಲಾರದು. ಕೊನೆಯ ಉಸಿರಿರುವವರೆಗೂ ವೈದ್ಯಕೀಯ ಸೇವೆಯನ್ನು ಮುಂದುವರೆಸುವ ಇಚ್ಛೆ ಇದೆ ಎಂದರು.
ಅಧ್ಯಕ್ಷತೆಯನ್ನು ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್ ವಹಿಸಿದ್ದರು. ರೈತ ನಾಯಕಿ ಕೆ.ಎಸ್.ನಂದಿನಿ ಜಯರಾಂ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ದತ್ತಿ ದಾನಿಗಳಾದ ಎಂ.ಕೆ.ಲಕ್ಷ್ಮೀ, ಮಂಜುಳಾ ಉದಯಶಂಕರ್, ರತ್ನಶ್ರೀ, ಹರೀಶ್‌ಕುಮಾರ್, ವತ್ಸಲಾ ಪ್ರಕಾಶ್, ಬಾಲಕೃಷ್ಣ ಇತರರಿದ್ದರು. ಕರ್ನಾಟಕ ಸಂಘ ಕೊಡಮಾಡುವ ಎಂ.ಶಿವಲಿಂಗಯ್ಯ ಸಮಾಜ ಸೇವಾ ಪ್ರಶಸ್ತಿಯನ್ನು ಎನ್.ಆರ್.ರಾಜೇಶ್ವರಿ ಅವರಿಗೆ 10 ಸಾವಿರ ನಗದಿನ ಜತೆಗೆ ಪ್ರದಾನ ಮಾಡಲಾಯಿತು.