

ಮಂಡ್ಯ: ಮಹಾತ್ಮ ಗಾಂಧೀಜಿ ಅವರ ಹೋರಾಟದಲ್ಲಿ ಲಕ್ಷಾಂತರ ಜನ ಕೈ ಜೋಡಿಸಿದ್ದರು. ಅವರಲ್ಲಿ ನಮ್ಮ ಜಿಲ್ಲೆಯ ಎಚ್.ಹೊನ್ನಯ್ಯ ಸೇರಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಪಠ್ಯಪುಸ್ತಕಗಳಲ್ಲಿ ಉಪಯುಕ್ತವಿಲ್ಲದ ಪಾಠ ಪ್ರವಚನವನ್ನು ಇಟ್ಟಿದ್ದೇವೆ. ಅವರ ಬದಲಿಗೆ ಇಂತಹ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಹನೀಯರ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಿ ಇಂದಿನ ಪೀಳಿಗೆಗೆ ಪರಿಚಯಿಸಬೇಕಾದ ಅಗತ್ಯವಿದೆ ಎಂದು ನಿವೃತ್ತ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದಲ್ಲಿ ಜನದನಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಇಂಡುವಾಳು ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ ಹಾಗೂ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ, ಎಚ್.ಶಾರದಮ್ಮ ಮತ್ತು ಕೆಂಪಯ್ಯ ಹೆಸರಿನ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.
ಭೂಮಿಗೆ ಮನುಷ್ಯನಾಗಿ ಬಂದ ಮೇಲೆ ಏನಾದರೂ ಕಾಣಿಕೆ ಕೊಟ್ಟು ಹೋಗುವ ನಿರ್ಧಾರ ಮಾಡಬೇಕು. ಇರ್ವಿನ್ ನಾಲೆ ಚಳವಳಿಯಲ್ಲಿ ಹೊನ್ನಯ್ಯ ಅವರ ಕೊಡುಗೆ ಅಪಾರ. ಮಿರ್ಜಾ ಇಸ್ಮಾಯಿಲ್ ಅವರನ್ನು ಭೇಟಿ ಮಾಡಲು ಶಿಸ್ತುಬದ್ಧ ಹೋರಾಟವನ್ನು ಹಮ್ಮಿಕೊಂಡಿದ್ದು ಸಂತೋಷದ ವಿಷಯ. ಹಿಂದೆ ನಮ್ಮ ರೈತರು ಮೂರು ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಇಂದು ಒಂದು ಬೆಳೆ ಬೆಳೆಯುವುದು ಕಷ್ಟವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ ವಹಿಸಿದ್ದರು. ಇಂಡುವಾಳು ಎಚ್.ಹೊನ್ನಯ್ಯ ಅವರ ಪುತ್ರ ಡಾ.ಎಚ್.ಸಿದ್ದಪ್ಪ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಜನದನಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೋಣನಹಳ್ಳಿ ಜಯರಾಂ, ಡಾ.ಎಂ.ಎಸ್.ಅನಿತಾ, ಡಾ.ಆದರ್ಶ, ಎಚ್.ಡಿ.ಸೋಮಶೇಖರ್, ಮಂಜುಳಾ ಉದಯಶಂಕರ್ ಇತರರಿದ್ದರು.
ಇದೇ ವೇಳೆ 26ನೇ ವರ್ಷದ ಇಂಡುವಾಳು ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ ಮಂಡ್ಯದ ಸೇವಾಕಿರಣ ಪಬ್ಲಿಕ್ ವೆಲ್‌ಫೇರ್ ಚಾರಿಟಬಲ್ ಟ್ರಸ್ಟ್ ಹಾಗೂ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ನಂಜನಗೂಡು ತಾಲೂಕು ಆಲಂಬೂರು ಗ್ರಾಮದ ಚಿಕ್ಕರಂಗಮ್ಮ ಅವರಿಗೆ ತಲಾ 25 ಸಾವಿರ ರೂ ನಗದು ಜತೆಗೆ ಪ್ರದಾನ ಮಾಡಲಾಯಿತು. ಅಂತೆಯೇ ಇದರೊಟ್ಟಿಗೆ 2022-23ನೇ ಸಾಲಿನ ಎಚ್.ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಇಂಡುವಾಳು ಪ್ರೌಢಶಾಲೆ ವಿದ್ಯಾರ್ಥಿಗಳಾದ ಸಂಜನಾ, ಲಕ್ಷ್ಮಣ ಹಾಗೂ ಕೊತ್ತತ್ತಿ ವಿದ್ಯಾಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮದನ್, ದೀಪಿಕಾ ಅವರಿಗೆ ನೀಡಿ ಗೌರವಿಸಲಾಯಿತು.