

ಮಂಡ್ಯ: ಕವಿಗಳು, ಹೋರಾಟಗಾರರು, ಸಾಧಕರನ್ನು ಒಂದೇ ಕೃತಿಯಲ್ಲಿ ಹಿಡಿದಿಟ್ಟುಕೊಳ್ಳುವ ಮೂಲಕ ಓದುಗರಿಗೆ ಪರಿಚಯಿಸುವ ಕೆಲಸವನ್ನು ಎಚ್.ಆರ್.ಕನ್ನಿಕಾ ಮಾಡಿರುವುದು ಮೆಚ್ಚುಗೆಯ ವಿಷಯ ಎಂದು ಕಸಾಪ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಶ್ಲಾಘಿಸಿದರು.
ನಗರದ ಕೃಷಿಕ್ ಸರ್ವೋದಯ ಫೌಂಡೇಷನ್ ಸಭಾಂಗಣದಲ್ಲಿ ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನ್ ಟ್ರಸ್ಟ್, ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಎಚ್.ಆರ್.ಕನ್ನಿಕಾ ಅವರ ಮಂಡ್ಯ ಜಿಲ್ಲೆಯ ಮಹಾನುಭಾವರು ಕೃತಿ ಬಿಡುಗಡೆ ಮತ್ತು ಸಾಧಕರಿಗೆ ಸಮಾಜ ಸೇವಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಕವಿಗಳು, ರೈತ ಮತ್ತು ಸ್ವಾತಂತ್ರ್ಯ ಹೋರಾಟಗಾರರು, ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಎಲೆಮರೆಕಾಯಿಯಂತಿದ್ದ ವ್ಯಕ್ತಿಗಳನ್ನು ಮಂಡ್ಯ ಜಿಲ್ಲೆಯ ಮಹಾನುಭಾವರು ಕೃತಿಯಲ್ಲಿ ಓದುವಂತೆ ಮಾಡಿರುವುದು ಒಂದು ಸಾಧನೆ. ಈ ಕೃತಿಯಲ್ಲಿ ಒಟ್ಟು ಆರು ಕ್ಷೇತ್ರಗಳ ನಾಯಕರು ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸಲಾಗಿದೆ ಎಂದರು.
ಉಪನ್ಯಾಸಕ ಮಹೇಶ್ ಮಾತನಾಡಿ, ನೆಲದ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು. ಇಡೀ ಕರ್ನಾಟಕದಲ್ಲಿ ಕನ್ನಡವನ್ನು ಸ್ವಚ್ಚವಾಗಿ ಮಾತನಾಡುವ ಜಿಲ್ಲೆ ಮಂಡ್ಯ. ಸೇವೆ, ರಾಜಕಾರಣ, ಕಲೆ, ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಪರಿಚಯಿಸುವ ಕೆಲವನ್ನು ಲೇಖಕಿ ಎಚ್.ಆರ್.ಕನ್ನಿಕಾ ಅವರು ಮಾಡಿರುವುದು ಉತ್ತಮ ಕೆಲಸವಾಗಿದೆ. ಏಕೆಂದರೆ ಮುಂದಿನ ಪೀಳಿಗೆಗೆ ಮಹನೀಯರ ಪರಿಚಯಿಸುವ ಕೆಲಸ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಜಿಲ್ಲಾಧಿಕಾರಿ ಟಿ.ತಿಮ್ಮೇಗೌಡ, ಮಕ್ಕಳು ಒಳ್ಳೆಯ ಪ್ರಜೆಗಳಾಗಬೇಕು. ಕನ್ನಿಕಾ ತರಬೇತಿಯಲ್ಲಿ ಉತ್ತಮವಾಗಿ ಜ್ಞಾನ ಸಿಗುತ್ತಿದೆ. ಸಿಗುತ್ತಿರುವ ಅವಕಾಶಗಳನ್ನು ಬಳಸಿಕೊಂಡು ಸಮಾಜದಲ್ಲಿ ಸಾಧನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಗುರು ಹಿರಿಯರಿಗೆ ಗೌರವ ಕೊಡುವುದು ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.
ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಲಯನ್ಸ್‌ನ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಟ್ರಸ್ಟ್ ಅಧ್ಯಕ್ಷ ಎಚ್.ಬಿ.ರಾಮಕೃಷ್ಣ, ಲೇಖಕಿ ಎಚ್.ಆರ್.ಕನ್ನಿಕಾ, ಕೆ.ಎಂ.ಮಹೇಶ್ ಇದ್ದರು.
ಪ್ರಶಸ್ತಿ ಪ್ರದಾನ: ಪಾಂಡವಪುರದ ಮನೆಯೊಂದರಲ್ಲಿ ಗೌಪ್ಯವಾಗಿ ನಡೆಯುತ್ತಿದ್ದ ಹೆಣ್ಣು ಭ್ರೂಣ ದಂಧೆಯ ಬಗ್ಗೆ ಆರೋಗ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದ ಪತ್ರಕರ್ತ ಕೆ.ಎನ್.ನಾಗೇಗೌಡ ಅವರಿಗೆ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನ ಮತ್ತು ಕನ್ನಿಕಾ ಶಿಲ್ಪಾ ನವೋದಯ ಟ್ರಸ್ಟ್‌ನಿಂದ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.