

ಮಾನ್ವಿ: ರಾಜ್ಯ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಪತ್ರಿಕಾ ವಿತರಕರಿಗೆ ಇ ಶ್ರಮ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ನಿರೀಕ್ಷಕ ಶಾಂತಮೂರ್ತಿ ತಿಳಿಸಿದರು.
ಪಟ್ಟಣದ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಪಟ್ಟಣ ಮತ್ತು ಗ್ರಾಮೀಣ ಭಾಗದ ಪತ್ರಿಕಾ ವಿತರಕರಿಗೆ ಇ ಶ್ರಮ ಕಾರ್ಡ್‌ಗಳನ್ನು ವಿತರಿಸಿ ಗುರುವಾರ ಮಾತನಾಡಿದರು. ಅರೆಕಾಲಿಕ ವೃತ್ತಿ ಮಾಡುವ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅಸಂಘಟಿತ ವಲಯಕ್ಕೊಳಪಡುತ್ತಾರೆ. ವಿತರಕರು ಪತ್ರಿಕೆ ವಿತರಣೆಗೆ ದ್ವಿಚಕ್ರ ವಾಹನ ಬಳಸುವುದರಿಂದ ಅಪಘಾತ ಸಂಭವಿಸಿದರೆ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ರಾಜ್ಯದ ನಿವಾಸಿಯಾಗಿರುವ 16 ರಿಂದ 59 ವಯೋಮಾನದ ವಿತರಕರು ಕೇಂದ್ರ ಸರ್ಕಾರದ ಇ ಶ್ರಮ ಪೋರ್ಟಲ್‌ನಲ್ಲಿ ನ್ಯೂಸ್ ಪೇಪರ್ ಬಾಯ್ ಎಂಬ ವರ್ಗದಡಿ ನೋಂದಣಿ ಮಾಡಿಸಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಹೊಂದಿರಬಾರದು ಎಂದು ಹೇಳಿದರು.
ಅಪಘಾತದಿಂದ ಮರಣ ಹೊಂದಿದಲ್ಲಿ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಒಂದು ಲಕ್ಷ ರೂಪಾಯಿವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ಸೌಲಭ್ಯ ಪಡೆಯಬಹುದಾಗಿ ಎಂದು ಶಾಂತಮೂರ್ತಿ ತಿಳಿಸಿದರು.