

ಮಡಿಕೇರಿ:
ವೃದ್ಧರು, ಅನಾರೋಗ್ಯದಿಂದ ನರಳುತ್ತಿರುವವರು, ಅಂಗವಿಕಲರು, ನಿರುದ್ಯೋಗಿಗಳು ಹಾಗೂ ಇತರೇ ಕಾರಣಗಳಿಂದ ಬಡತನದ ಬವಣೆಯಲ್ಲರುವವರಿಗೆ ತನ್ನ ಆರ್ಥಿಕ ಸಾಮರ್ಥ್ಯದೊಳಗೆ ನೆರವು ನೀಡುವುದು ಹಾಗೂ ಅವರ ಸಾಮಾಜಿಕ ಸ್ಥಿತಿಯಲ್ಲಿ ಸುಧಾರಣೆ ತರುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಹಾಗಾಗಿಯೇ ಅಸಹಾಯಕ, ಅಶಕ್ತ ಹಾಗೂ ದುರ್ಬಲ ವರ್ಗದವರ ರಕ್ಷಣೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮವರ್ತಿ ಹೊಣೆ ಎನ್ನುತ್ತದೆ ಸಂವಿಧಾನ. ಈ ಹಿನ್ನೆಲೆಯಲ್ಲಿ ಬಡತನ, ನಿರ್ಗತಿಕತೆ ಹಾಗೂ ಅನಿಶ್ಚಿತ ಪರಿಸ್ಥಿತಿ ನಿಭಾಯಿಸಲು, ಸಮಾಜದಲ್ಲಿ ಬವಣಗೆ ತುತ್ತಾಗುವ ಜನ ಸಮುದಾಯಕ್ಕೆ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯ ನಿರಂತರವಾಗಿ ಒದಗಿಸಲು ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತಂದಿದೆ.
ಕೊಡಗಿನಲ್ಲಿ ಒಟ್ಟು ೫೭,೫೦೬ ಫಲಾನುಭವಿಗಳು ಸಾಮಾಜಿಕ ಭದ್ರತಾ ಯೋಜನೆಗಳ ವಿವಿಧ ಕಾರ್ಯಕ್ರಮದ ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಗಳಿಗೆ ದೊಡ್ಡ ಇತಿಹಾಸವಿದೆ. ೧೮೮೦ರಲ್ಲಿ ಚಾನ್ಸೆಲರ್ ಆಟೋವನ್ ಬಿಸ್ಮಾರ್ಕ ಜರ್ಮನಿಯ ದುರ್ಬಲ ಹಾಗೂ ಅಸಹಾಯಕ ಜನತೆಗಾಗಿ ಸಾಮಾಜಿಕ ವಿಮಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಬೇರೆ ಯೂರೋಪಿಯನ್ ದೇಶಗಳು ತಮ್ಮ ಜನತೆಯ ಏಳಿಗೆಗಾಗಿ ಈ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡವು. ನಂತರ ಅಮೇರಿಕ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ ವೆಲ್ಟ್ ದೇಶವನ್ನು ಅತ್ಯಂತ ವಿಷಮ ಆರ್ಥಿಕ ಸಂಕಷ್ಟದಿಂದ ಮಾಡಲು ಸಾಮಾಜಿಕ ಭದ್ರತಾ ಕಾನೂನನ್ನು ೧೯೩೫ನೇ ಇಸವಿಯಲ್ಲಿ ಜಾರಿಗೆ ತಂದರು.
ಕರ್ನಾಟಕ ರಾಜ್ಯ ಸರ್ಕಾರ ಅಶಕ್ತ ವೃದ್ಧರ ರಕ್ಷಣೆಗಾಗಿ ೧೯೬೫ರಿಂದ ೪೦ರೂ. ಮಾಸಿಕ ಪಿಂಚಣಿ ನೀಡುತ್ತಾ ಬಂದಿದೆ. ಅಂಗವಿಕಲರ ಸಾಮಾಜಿಕ ಭದ್ರತೆಗಾಗಿ ೧೯೭೯ರಲ್ಲಿ ಮತ್ತು ನಿರ್ಗತಿಕ ವಿಧವೆಯರ ರಕ್ಷಣೆಗಾಗಿ ೧೯೮೪ರಲ್ಲಿ ೪೦ ರೂ. ಮಾಸಿಕ ಪಿಂಚಣಿಯನ್ನು ಜಾರಿಗೆ ತಂದಿತು. ಸದ್ಯಕ್ಕೆ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಸರ್ಕಾರ ನೀಡುತ್ತಿರುವ ಆರ್ಥಿಕ ಸಹಾಯ ಪಡೆಯುತ್ತಿರುವವರು ರಾಜ್ಯದಲ್ಲಿ ೭೭,೬೩,೫೧೪ ಫಲಾನುಭವಿಗಳು ಇದ್ದಾರೆ. ಇವರಿಗಾಗಿ ಸರ್ಕಾರ ೨೦೨೩-೨೪ನೇ ಸಾಲಿನ ಬಜೆಟ್‌ನಲ್ಲಿ ೧೦,೧೩೨.೪೬ ಕೋಟಿ ರೂ. ತೆಗೆದಿಟ್ಟಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ರಾಜ್ಯದಲ್ಲಿ ಕನಿಷ್ಠ ೬೦೦ ರೂ.ನಿಂದ ಗರಿಷ್ಠ ೧೦ ಸಾವಿರ ರೂ. ತನಕ ಕಂದಾಯ ಇಲಾಖೆ ಮೂಲಕ ಮಾಸಾಸನ ಪಡೆಯುತ್ತಿರುವವರು ಇದ್ದಾರೆ.
ಕೊಡಗಿನಲ್ಲಿ ಇವರ ಸಂಖ್ಯೆ ೫೭,೫೦೬ ಜನ ಸಾಮಾಜಿಕ ಭದ್ರತಾ ಯೋಜನೆಯ ಉಪಯೋಗ ಪಡೆಯುತ್ತಿದ್ದಾರೆ. ೩೨ ಸಾವಿರ ರೂ.ಗಳಿಗಿಂತ ಕಡಿಮೆ ವಾರ್ಷಿಕ ಆದಾಯದ ೬೦-೬೪ ವಯಸ್ಸಿನವರಿಗೆ ತಿಂಗಳಿಗೆ ೬೦೦ ರೂ. ವೃದ್ಧಾಪ್ಯ ವೇತನ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ೫,೧೩೦ ಮಂದಿ ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ೬೫-೭೯ ಮತ್ತು ೮೦ ವರ್ಷ ಮೇಲಿನವರಿಗೆ ಮಾಸಿಕ ೧,೨೦೦ ರೂ. ವೃದ್ಧಾಪ್ಯ ವೇತನ ಕೊಡಲಾಗುತ್ತಿದ್ದು, ೬೫-೭೯ ವಯಸ್ಸಿನ ೭,೮೩೨ ಹಾಗೂ ೮೦ ವರ್ಷ ಮೇಲ್ಪಟ್ಟ ೧,೭೨೦ ಫಲಾನುಭವಿಗಳು ಈ ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದಾರೆ. ವಾರ್ಷಿಕ ೩೨ ಸಾವಿರ ರೂ.ಗಿಂತ ಕಡಿಮೆ ವಾರ್ಷಿಕ ಆದಾಯದ ೧೮ ವರ್ಷ ಮೇಲ್ಪಟ್ಟ ವಿಧವೆಯರಿಗೆ ಮಾಸಿಕ ೮೦೦ ರೂ. ವಿಧವಾ ವೇತನ ಕೊಡಲಾಗುತ್ತಿದ್ದು ಜಿಲ್ಲೆಯಲ್ಲಿ ೧೫,೦೭೫ ಮಂದಿಗೆ ಈ ಯೋಜನೆಯಿಂದ ಲಾಭ ಆಗುತ್ತಿದೆ.
ಬಡತನ ರೇಖೆಗಿಂತ ಕೆಳಗೆ ಇರುವ ವಾರ್ಷಿಕ ಆದಾಯ ೩೨ ಸಾವಿರಕ್ಕಿಂತ ಕಡಿಮೆ ಇರುವ ಅಂಗವಿಕಲರಿಗೆ ಮಾಸಿಕ ಅಂಗವಿಕಲ ವೇತನ ನೀಡಲಾಗುತ್ತಿದೆ. ಶೇ.೪೦ ಅಂಗವಿಕಲತೆ ಹೊಂದಿರುವವರಿಗೆ ತಿಂಗಳಿಗೆ ೮೦೦ ರೂ. ನೀಡಲಾಗುತ್ತಿದೆ. ಕೊಡಗಿನಲ್ಲಿ ೧,೮೨೬ ಮಂದಿಗೆ ಈ ಮಾಸಾಸನ ಸಿಗುತ್ತಿದೆ. ಶೇ.೭೫ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವವರಿಗೆ ತಿಂಗಳಿಗೆ ೧,೪೦೦ ರೂ. ಕೊಡಲಾಗುತ್ತಿದ್ದು, ಜಿಲ್ಲೆಯಲ್ಲಿ ೩,೦೨೭ ಮಂದಿಗೆ ಇದರಿಂದ ಪ್ರಯೋಜನ ಆಗುತ್ತಿದೆ. ಶೇ.೭೫ಕ್ಕಿಂದ ಹೆಚ್ಚಿನ ಮನೋವೈಕಲ್ಯತೆ ಹೊಂದಿದವರಿಗೆ ೨ ಸಾವಿರ ರೂ. ಕೊಡಲಾಗುತ್ತಿದ್ದು, ಜಿಲ್ಲೆಯ ೬೦೫ ಮಂದಿಗೆ ಈ ಹಣ ಬರುತ್ತಿದೆ.
ಕುಟುಂಬ ಆದಾಯ ೩೨ ಸಾವಿರಕ್ಕಿಂತ ಕಡಿಮೆ ಇರುವ ೬೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಯೋಜನೆ ಜಾರಿಯಲ್ಲಿದ್ದು, ಮಾಸಿಕ ೧೨೦೦ ರೂ. ಮಾಸಾಸನ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ೨೧,೦೭೦ ಮಂದಿ ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳು ಇದ್ದಾರೆ.
ಕುಟುಂಬ ಆದಾಯ ೩೨ ಸಾವಿರಕ್ಕಿಂತ ಕಡಿಮೆ ಇರುವ ೪೦-೫೪ ವರ್ಷ ವಯಸ್ಸಿನೊಳಗಿನ ಅವಿವಾಹಿತ ಮಹಿಳೆಯರಿಗೆ ತಿಂಗಳಿಗೆ ೮೦೦ ರೂ. ಕೊಡುವ ’ಮನಸ್ವಿನಿ’ ಯೋಜನೆ ಜಾರಿಯಲ್ಲಿದ್ದು, ಕೊಡಗಿನಲ್ಲಿ ೧,೧೪೪ ಮಹಿಳೆಯರು ಈ ಯೋಜನೆ ಲಾಭ ಪಡೆಯುತ್ತಿದ್ದಾರೆ. ಕುಟುಂಬ ಆದಾಯ ೩೨ ಸಾವಿರಕ್ಕಿಂತ ಕಡಿಮೆ ಇರುವ ೨೫-೬೪ ವರ್ಷ ವಯಸ್ಸಿನೊಳಗಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ತಿಂಗಳಿಗೆ ೮೦೦ ರೂ. ಕೊಡುವ ’ಮೈತ್ರಿ’ ಯೋಜನೆಯೂ ಇದ್ದು ಕೊಡಗಿನಲ್ಲಿ ಒಬ್ಬರಿಗೆ ಈ ಹಣ ಬರುತ್ತಿದೆ.
ರೈತರ ಆತ್ಮಹತ್ಯೆ ಪ್ರಕರಣಗಳಡಿ ಗುರುತಿಸಿ ಕೃಷಿ ಇಲಾಖೆಯಿಂದ ಪರಿಹಾರ ಪಡೆದುಕೊಂಡಿರುವ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ವಿಧವಾ ಮಾಸಾಸನ ಎಂದು ಮಾಸಿಕ ೨ ಸಾವಿರ ರೂ. ಕೊಡಲಾಗುತ್ತದೆ. ಜಿಲ್ಲೆಯಲ್ಲಿ ೭೮ ಮಹಿಳೆಯರು ಈ ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಮಾಸಿಕ ೧೦ ಸಾವಿರ ರೂ., ಶೇ.೨೫-ಶೇ.೫೯ ರಷ್ಟು ಅಂಗವಿಕಲತೆ ಹೊಂದಿರುವ ಎಂಡೋಸಲ್ಫಾನ್ ಪೀಡಿತರಿಗೆ ಮಾಸಿಕ ೨ ಸಾವಿರ ರೂ ಮತ್ತು ಶೇ. ೬೦ಕ್ಕಿಂತಲೂ ಅಧಿಕ ಅಂಗವಿಕಲತೆ ಹೊಂದಿರುವವರಿಗೆ ತಿಂಗಳಿಗೆ ೪ ಸಾವಿರ ರೂ. ಮಾಸಾಸನ ಕೊಡಲಾಗುತ್ತದೆ. ಜಿಲ್ಲೆಯಲ್ಲಿ ಈ ೨ ಯೋಜನೆಯ ಮಾಸಾಸನ ಪಡೆಯುತ್ತಿರುವವರು ಯಾರೂ ಇಲ್ಲ.
ರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕ, ಅಶಕ್ತ ಹಾಗೂ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತಾ ಯೋಜನಗಳಡಿ ಆರ್ಥಿಕ ಸಹಾಯ ಒದಗಿಸುತ್ತಿದೆ. ಈ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಲು ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕ ವೇತನ, ಸಂಧ್ಯಾ ಸುರಕ್ಷಾ ವೇತನ, ಮನಸ್ವಿ ಯೋಜನೆ, ಮೈತ್ರಿ ಯೋಜನೆ, ಸಾಲಭಾದೆಯಿಂದ
ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ವಿಧವಾ ಮಾಸಾಶನ, ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಸಹಾಯಧನ, ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಿತ ವೇತನ ಪಿಂಚಣಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.
ಕೃಷ್ಣ ಬೈರೇಗೌಡ, ಕಂದಾಯ ಸಚಿವ
೨ ಸಾವಿರ ಪಿಂಚಣಿ ಹಣ ಕಳೆದ ೬ ತಿಂಗಳಿನಿಂದ ಬರುತ್ತಿದೆ. ಜೀವನಕ್ಕೆ ಉಪಯೋಗವಾಗಿದೆ. ಎರಡು ಮೂರು ತಿಂಗಳಿಗೆ ಒಮ್ಮೆ ಹಾಕುತ್ತಾರೆ. ಪ್ರತಿ ತಿಂಗಳು ಕೊಟ್ಟರೆ ಅನುಕೂಲ. ಮಾಸಿಕ ೩ ಸಾವಿರ ರೂ. ಕೊಟ್ಟರೆ ಜೀವನಕ್ಕೆ ಉಪಯೋಗವಾಗುತ್ತಿತ್ತು. ನಾನು ಒಬ್ಬಳೇ ಮನೆಯಲ್ಲಿ ಇದ್ದೇನೆ. ಮಗ, ಸೊಸೆ ತುಮಕೂರಿನಲ್ಲಿ ಇದ್ದಾರೆ. ಎರಡು ಎಕರೆ ಜಾಗ ಇದೆ. ಮಳೆ ಇಲ್ಲದೆ ಕೃಷಿ ಫಸಲಿಗೆ ಹಾನಿಯಾಗಿದೆ.