

ಚಿಕ್ಕಬಳ್ಳಾಪುರ: ಆಂಧ್ರ ಗಡಿಭಾಗದ ಜಿಲ್ಲೆಯ ತಾಲೂಕುಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ ಎನ್.ಭಾಸ್ಕರ್ ಆತಂಕ ವ್ಯಕ್ತಪಡಿಸಿದರು.
ನಗರದ ತಾ.ಪಂ.ಕಚೇರಿಯಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕೈಗೊಂಡಿದ್ದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್ ಮಾತನಾಡಿ, ಇಲಾಖೆಯ ಸಹಾಯವಾಣಿ ಇಲ್ಲವೇ ಪೊಲೀಸ್ ಇಲಾಖೆಯ ಮೂಲಕ ದೌರ್ಜನ್ಯಕ್ಕೆ ಒಳಗಾದ, ಪರಿತ್ಯಕ್ತ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಬಾಲ ಮಂದಿರ, ಸ್ವಾಧಾರ ಸಾಂತ್ವಾನ ಸಂಸ್ಥೆಗಳಲ್ಲಿ ಆಶ್ರಯ ನೀಡಿ, ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಎಸ್.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೆಂಕಟಯ್ಯ ಗೌಡ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮುನಿನಾರಾಯಣಸ್ವಾಮಿ, ತಾ.ಪಂ.ಇಒ ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಧರಯ್ಯ, ಸಂಪನ್ಮೂಲ ವ್ಯಕ್ತಿ ಎಂ.ಜಿ. ಗೋಪಾಲ್, ಪೊಲೀಸ್ ತರಬೇತಿದಾರ ರೋಹಿತ್, ಜಿಲ್ಲಾ ಮತ್ತು ರಕ್ಷಣಾ ಘಟಕದ ಕಾನೂನು ಹಾಗೂ ಪರಿವೀಕ್ಷಣಾಧಿಕಾರಿ ಡಿ.ಕೆ.ರಾಮೇಗೌಡ ಮತ್ತಿತರರು ಇದ್ದರು.
*ಮಕ್ಕಳ ರಕ್ಷಣಾ ಕೇಂದ್ರಗಳು
ಜಿಲ್ಲೆಯಲ್ಲಿ ಬಾಲಮಂದಿರ ಮತ್ತು ಸ್ವಾಧಾರ ಕೇಂದ್ರಗಳು ಇದ್ದು 18 ವರ್ಷದೊಳಗಿನ ಮಕ್ಕಳಿಗೆ ರಕ್ಷಣೆ ನೀಡುತ್ತಿವೆ. ಚಿಕ್ಕಬಳ್ಳಾಪುರದಲ್ಲಿ ಬಾಲ ಮಂದಿರ, 1 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಗುರುಕುಲ ಸೇರಿದಂತೆ ಐದು ಸಂಸ್ಥೆಗಳು, ಶಿಡ್ಲಟ್ಟ ಮತ್ತು ಚಿಂತಾಮಣಿಯಲ್ಲಿ 3 ಸಂಸ್ಥೆಗಳಿವೆ, ಇಲ್ಲಿನ ಕೇಂದ್ರಗಳಲ್ಲಿನ ಸಿಬ್ಬಂದಿಗೆ ಕಾಲ ಕಾಲಕ್ಕೆ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.
"ಕಾರ್ಯಾಗಾರದಲ್ಲಿ ಚರ್ಚೆ
ಕಾರ್ಯಾಚಾರದಲ್ಲಿ ಮಿಷನ್ ವಾತ್ಸಲ್ಯ ಯೋಜನೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸಂಬಂಧಿತ ಕಾನೂನುಗಳು, ಪಾಲಕರಿಂದ ಬೇರ್ಪಟ್ಟ ಮಕ್ಕಳು, ಬಾಲಕಾರ್ಮಿಕತೆ, ಬಾಲ್ಯವಿವಾಹ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಗೊಳಗಾದ ಮಕ್ಕಳ ಪಾಲನೆ, ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳ ಬಗ್ಗೆ ಚರ್ಚಿಸಲಾಯಿತು.