ಸಾಮಾಜಿಕ ಜವಾಬ್ದಾರಿ ಅರಿಯಿರಿ

7SND-04
Published on

ಸಿಂಧನೂರು: ವಿದ್ಯಾರ್ಥಿಗಳು ನಿಷ್ಠೆಯಿಂದ ಅಭ್ಯಾಸ ಮಾಡುವ ಜತೆಗೆ ನೈತಿಕ ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಜೀವನ ಸಾಗಿಸಬೇಕು. ಈ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಪಿಬ್ಲ್ಯುಡಿ ಕ್ಯಾಂಪ್‌ನಲ್ಲಿರುವ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಯಚೂರು ವಿಶ್ವವಿದ್ಯಾಲಯ ಹಾಗೂ ಅನಿಕೇತನ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಅಪೌಷ್ಟಿಕ ಕಾರಣದಿಂದ ದೇಶದಲ್ಲಿಯೇ ಅತ್ಯಂತ ಹಿಂದುಳಿದಿರುವುದರಿಂದ ಈ ಭಾಗದ ವಿದ್ಯಾರ್ಥಿ-ಯುವಜನರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಗತಿಯತ್ತ ದಾಪುಗಾಲು ಹಾಕಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿ, ಮಹಾತ್ಮ ಗಾಂಧಿ ಜನ್ಮಶತಾಬ್ದಿ ಸಂದರ್ಭದಲ್ಲಿ ಎನ್‌ಎಸ್‌ಎಸ್ ಅನುಷ್ಠಾನಕ್ಕೆ ಬಂದಿದೆ. ಗಾಂಧೀಜಿ ಯುವಜನರಲ್ಲಿ ಅಪಾರ ವಿಶ್ವಾಸ ಇಟ್ಟುಕೊಂಡಿದ್ದರು. ಯುವಕರಿಂದಲೇ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವೆಂದು ನಂಬಿದ್ದರು. ಆ ಹಿನ್ನೆಲೆಯಲ್ಲಿ ಸೇವೆಯ ಮಹತ್ವವನ್ನು ಯುವಜನತೆಗೆ ತಿಳಿಸಿಕೊಡಲು ಎನ್‌ಎಸ್‌ಎಸ್ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ವಿವಿಧ ಕಾಲೇಜಿನ ಪ್ರಾಚಾರ್ಯರಾದ ಎಸ್.ಶಿವರಾಜ, ತಿಮ್ಮಣ್ಣ ರಾಮತ್ನಾಳ, ಅನಿಕೇತನ ಕಾಲೇಜಿನ ಅಧ್ಯಕ್ಷ ಡಿ.ಎಚ್.ಕಂಬಳಿ, ಖಜಾಂಚಿ ಗ್ಯಾನಪ್ಪ ಕನ್ನಾಂಪೇಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ಕಾಂಗ್ರೆಸ್ ಪ್ರಮುಖರಾದ ಎನ್.ಅಮರೇಶ, ಖಾಜಿ ಮಲಿಕ್, ಲಿಂಗಾಧರ ಗುರುಸ್ವಾಮಿ, ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ನಾಗೇಂದ್ರಪ್ಪ, ನಿವೃತ್ತ ಅಧಿಕಾರಿ ವಿಠಲ್‌ರಾವ್, ಮುಖ್ಯಶಿಕ್ಷಕಿ ಭಾಗ್ಯಶ್ರೀ, ಎಸ್‌ಡಿಎಂಸಿ ಅಧ್ಯಕ್ಷ ಪ್ರವೀಣಕುಮಾರ, ಎನ್‌ಎಸ್‌ಎಸ್ ಯೋಜನಾಧಿಕಾರಿ ಜಗದೀಶ ಬೆನ್ನೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net