ಸಾಮಾಜಿಕ ಜವಾಬ್ದಾರಿ ಲಕ್ಕುಂಡಿ ರಾಣಿ ಚನ್ನಮ್ಮ ವಸತಿ ಶಾಲೆ ಗುರಿ

04 NRL COLG
Published on

ನರೇಗಲ್ಲ: ಇಂದಿನ ಯಾಂತ್ರಿಕ ಜೀವನ ಪದ್ಧತಿಯ ಪರಿಣಾಮ ಪಾಲಕರು ಮಕ್ಕಳನ್ನು ವಿದ್ಯಾಂತರನ್ನಾಗಿಸಲು ಲಕ್ಷಾಂತರ ರೂಪಾಯಿ ಡೊನೇಷನ್ ನೀಡಿ ಖಾಸಗಿ ಶಾಲೆಗಳಿಗೆ ಕಳುಹಿಸುವುದು ಸಾಮಾನ್ಯವಾಗಿದೆ. ಆದರೆ, ಯಾವುದೇ ಶುಲ್ಕವಿಲ್ಲದೆ ವಸತಿ ಸಹಿತವಾಗಿ ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಲಕ್ಕುಂಡಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ.

2017- 18ನೇ ಸಾಲಿನಲ್ಲಿ ಪ್ರಾರಂಭವಾದ ಲಕ್ಕುಂಡಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯು ಆರಂಭದ ಹಂತದಲ್ಲಿ ಲಕ್ಕುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಲ್ಲಿ ಮತ್ತು ಬೆಟಗೇರಿಯ ಶಿವರತ್ನ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. 2022-23ರಲ್ಲಿ ಲಕ್ಕುಂಡಿಯ ಹೊರ ವಲಯದ ಗದಗ-ಕೊಪ್ಪಳ ಹೆದ್ದಾರಿಯ ಹತ್ತಿರ ಸುಮಾರು 7.21 ಎಕರೆ ಪ್ರದೇಶದಲ್ಲಿ 22 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
ಕಟ್ಟಡದ ವಿಶೇಷತೆ : ಸುಮಾರು 7 ಎಕರೆ 21 ಗುಂಟೆ ಜಮೀನಿನಲ್ಲಿ ನಿರ್ಮಾಣವಾಗಿರುವ ಲಕ್ಕುಂಡಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯು ಶಾಲಾ ಕಟ್ಟಡ, ವಸತಿ ನಿಲಯ, ಭೋಜನಾಲಯ, ರಂಗ ಮಂದಿರ, ಸಿಬ್ಬಂದಿ ವಸತಿಗೃಹ, 18 ಶಾಲಾ ಕೊಠಡಿ, 18 ವಸತಿ ಗೃಹಗಳು, 42 ಶೌಚಗೃಹಗಳು, 38 ಸ್ನಾನಗೃಹಗಳನ್ನು ಹೊಂದುವ ಮೂಲಕ ಖಾಸಗಿ ಶಾಲೆಗಳಿಗಿಂತ ಯಾವುದಕ್ಕೂ ಕಮ್ಮಿ ಇಲ್ಲ ಎನ್ನುವಂತಿದೆ.

ಸಿಬ್ಬಂದಿ: 6ನೇ ತರಗತಿಯಿಂದ 10ನೇ ತರಗತಿಯವರೆಗೆ ಒಟ್ಟು 239 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, 12 ಕಾಯಂ ಸಿಬ್ಬಂದಿ, ಇಬ್ಬರು ಅತಿಥಿ ಶಿಕ್ಷಕರು, ವಸತಿ ನಿಲಯದಲ್ಲಿ 1 ನಿಲಯಪಾಲಕರು ಮತ್ತು 7 ಡಿ. ದರ್ಜೆ ನೌಕರರಿದ್ದಾರೆ. ಜನ್ಮದಿನಕ್ಕೊಂದು ಸಸಿ : ಶಾಲೆಯ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ವೃದ್ಧಿಸಲು ಶಾಲೆಯಲ್ಲಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿನಿಯರ ಜನ್ಮ ದಿನದಂದು ಅವರಿಂದಲೇ ಒಂದು ಸಸಿಯನ್ನು ನೆಡಲಾಗುತ್ತದೆ. ಶಾಲೆಯಲ್ಲಿ ಕಲಿಯುವಷ್ಟು ದಿನ ಆ ಮರದ ಸಂರಕ್ಷಣೆಯ ಜವಾಬ್ದಾರಿ ವಿದ್ಯಾರ್ಥಿನಿಯದ್ದೇ ಆಗಿರುತ್ತದೆ. ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸುಮಾರು 150ಕ್ಕೂ ಅಧಿಕ ಮರಗಳನ್ನು ನೆಡಲಾಗಿದೆ. ಆಯುರ್ವೇದ ಕೈತೋಟ: ಶಾಲೆಯ ಹಿಂಬದಿಯಲ್ಲಿ ಬೆಟ್ಟದ ನೆಲ್ಲಿ, ತುಳಸಿ, ಅಣ್ಣೆಸೊಪ್ಪು, ಅಮಟೆ, ಅಮೃತ ಬಳ್ಳಿ, ಅಶ್ವಗಂಧ, ಈಶ್ವರ ಬಳ್ಳಿ ಸೇರಿದಂತೆ ಸುಮಾರು 150ಕ್ಕೂ ಅಧಿಕ ಆಯುರ್ವೇದ ಸಸಿಗಳನ್ನು ನೆಡಲಾಗಿದ್ದು, ಅವುಗಳ ಉಪಯೋಗಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿಕೊಡಲಾಗುತ್ತಿದೆ. ಎರಡು ವರ್ಷಗಳಿಂದ ಶೇ. 100 ಫಲಿತಾಂಶ: ಕಳೆದೆರಡು ವರ್ಷಗಳಿಂದ ಈ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ನೀಡುವ ಮೂಲಕ ಗಮನ ಸೆಳೆದಿದೆ. 2021-22ರಲ್ಲಿ ಸುಷ್ಮಿತಾ ಪೂಜಾರ ಶೇ. 98.24 ಅಂಕ ಹಾಗೂ 2022-23ನೇ ಸಾಲಿನಲ್ಲಿ ಶೋಭಾ ಸಂಚಾಲಿ ಶೇ. 95.52 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಸಮಗ್ರ ವೀರಾಗ್ರಣಿ: ದೈಹಿಕ ಶಿಕ್ಷಣ ಶಿಕ್ಷಕ ವೀರೇಶ ಕಮ್ಮಾರ ಅವರ ಪರಿಶ್ರಮದ ಫಲವಾಗಿ ಕದಡಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಲಕ್ಕುಂಡಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ವೈಯಕ್ತಿಕ ಹಾಗೂ ಶಾಲೆಯು ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಗಿದೆ. ಗುಂಪು ಆಟಗಳಾದ ಕಬ್ಬಡ್ಡಿ (ಪ್ರಥಮ), ಖೋ-ಖೋ (ದ್ವಿತೀಯ), ಥ್ರೋ ಬಾಲ್ (ದ್ವಿತೀಯ) 4*100 ಮೀ. ರಿಲೇ ಪ್ರಥಮ, ವೈಯಕ್ತಿಕ ಕ್ರೀಡೆಗಳಾದ 100, 200, 400, 800, 1500, 3000 ಮೀಟರ್ ಓಟದಲ್ಲಿ ಪ್ರಥಮ, ಹಾಗೂ 5000 ಮೀ. ನಡಿಗೆಯಲ್ಲಿ ಪ್ರಥಮ, ಉದ್ದ ಜಿಗಿತ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, ಎತ್ತರ ಜಿಗಿತ ಪ್ರಥಮ, ಭರ್ಚಿ ಎಸೆತ ಪ್ರಥಮ, ಚಕ್ರ ಎಸೆತ ಪ್ರಥಮ, 80 ಮೀ ಹರ್ಡಲ್ಸ್ ಪ್ರಥಮ, ತೃತೀಯ ಸ್ಥಾನ ಪಡೆದಿದ್ದಾರೆ. ದೀಪಾ ಲಮಾಣಿ ವೈಯಕ್ತಿಕ ವೀಭಾಗದಲ್ಲಿ ಸಮಗ್ರ ವೀರಾಗ್ರಣಿಯಾಗಿದ್ದಾಳೆ.

ಸರಿಗಮಪ ಫೈನಲ್ ಪ್ರವೇಶ: ಶಾಲೆಯ ವಿದ್ಯಾರ್ಥಿನಿ ಪ್ರತೀಕ್ಷಾ ಭಜಂತ್ರಿ ಖಾಸಗಿ ವಾಹಿನಿಯ ಸರಿಗಮಪ ರಿಯಾಲಿಟಿ ಷೋನ ಅಂತಿಮ ಹಂತಕ್ಕೆ ತಲುಪುವ ಮೂಲಕ ಶಾಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಎತ್ತಿ ಹಿಡಿದಿದ್ದಾಳೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿ, ಲಕ್ಕುಂಡಿ ಉತ್ಸವದ ನಿಮಿತ್ತ ಜರುಗುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಶಾಲೆಯ ಮಕ್ಕಳು ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಕ್ರೈಸ್ ಶಾಲೆಗಳು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿವೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರದ ಉಚಿತ ಶಿಕ್ಷಣದ ಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಗುಣಮಟ್ಟದ ಆಹಾರ, ಶಿಕ್ಷಣವನ್ನು ನೀಡುವುದೇ ನಮ್ಮ ಶಾಲೆಗಳ ಮುಖ್ಯ ಉದ್ದೇಶವಾಗಿದೆ.-ರವಿ ಉದ್ದಣ್ಣವರ ಪ್ರಾಚಾರ್ಯರು ಲಕ್ಕುಂಡಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯವೂ ಅತ್ಯುತ್ತಮ ಆಹಾರ ನೀಡಲಾಗುತ್ತಿದೆ. ಬೆಳಗ್ಗೆ ಬಿಸಿ ಬಿಸಿಯಾದ ತರಹೇವಾರಿ ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಅಲ್ಪೋಪಹಾರ, ರಾತ್ರಿ ಊಟ ನೀಡುವ ಮೂಲಕ ಮಕ್ಕಳನ್ನು ಆರೋಗ್ಯವಂತರನ್ನಾಗಿಸಲಾಗುತ್ತಿದೆ. ಉತ್ತಮ ಆರೋಗ್ಯದೊಂದಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ.-ಎಸ್.ಎಚ್. ಕೊಂಡಿಕೊಪ್ಪ, ನಿಲಯ ಪಾಲಕರು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ ಹಾಗೂ ಪ್ರಾಚಾರ್ಯ, ಸಿಬ್ಬಂದಿ ಸಲಹೆ, ಮಾರ್ಗದರ್ಶನ ಮತ್ತು ಸಹಕಾರದಿಂದ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ವಿದ್ಯಾರ್ಥಿನಿಯರ ಜನ್ಮದಿನದ ಪ್ರಯುಕ್ತ ಪ್ರತಿ ವಿದ್ಯಾರ್ಥಿನಿಯಿಂದ ಸಸಿ ನೆಡಲಾಗುತ್ತದೆ.-ವೀರೇಶ ಕಮ್ಮಾರ ದೈಹಿಕ ಶಿಕ್ಷಣ ಶಿಕ್ಷಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net