ರಂಗಭೂಮಿಯಿಂದ ಸಮಾಜ ಸುಧಾರಣೆ

10 GDG 1
Published on

ಗದಗ: ರಂಗಭೂಮಿ ನಾಟಕಗಳು ಸಮಾಜ ಸುಧಾರಣೆಯಲ್ಲಿ ಮುಖ್ಯ ಭೂಮಿಕೆ ವಹಿಸುತ್ತವೆ. ಪುಟ್ಟರಾಜ ಕವಿ ಗವಾಯಿಗಳವರ ಕರ್ಮ ಭೂಮಿಯಲ್ಲಿ ಅಖಿಲ ಕರ್ನಾಟಕ ನಾಟಕ ಲೇಖಕರ ಸಂಘದ ಕೇಂದ್ರ ಕಚೇರಿಯನ್ನು ಉದ್ಘಾಟಿಸುತ್ತಿರುವುದು ಸ್ತುತ್ಯರ್ಹ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಾನುವಾರ ಅಖಿಲ ಕರ್ನಾಟಕ ಲೇಖಕರ ಸಂಘದ ಕೇಂದ್ರ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಲೆ ಮತ್ತು ಸಂಸ್ಕೃತಿಯು ಸಮಾಜದ ಅತಿ ಪವಿತ್ರ ಹಾಗೂ ಜೀವಂತ ಅಂಗಗಳು. ಇವುಗಳನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿ ನಾಟಕವು ಪ್ರಮುಖ ಪಾತ್ರವಹಿಸಿದೆ. ಇಂತಹ ಒಂದು ಸಾಂಸ್ಕೃತಿಕ ಪ್ರಯತ್ನವಾಗಿ ಅಖಿಲ ಕರ್ನಾಟಕ ಲೇಖಕರ ಸಂಘ ಅಸ್ತಿತ್ವಕ್ಕೆ ಬಂದಿದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿದ್ದಲಿಂಗಯ್ಯ ಸ್ವಾಮಿ ಮಲಕೋಡ ಮಾತನಾಡಿ, ನಾಟಕ ಪ್ರಯೋಗ ಸಂದರ್ಭದಲ್ಲಿ ಭಿತ್ತಿಪತ್ರದಲ್ಲಿ ಲೇಖಕರ ಹೆಸರು ನಮೂದಿಸಬೇಕು ಮತ್ತು ಕವಿ ಕಾಣಿಕೆ ಸಲ್ಲಿಸಬೇಕು ಎಂದು ಆಗ್ರಹಿಸಿದರಲ್ಲದೇ ಲೇಖಕರ ಜೀವನ ಭದ್ರತೆಗಾಗಿ ಸಂಘದಿಂದ 2 ಲಕ್ಷ ರೂ. ಗುಂಪು ವಿಮಾ ಯೋಜನೆ ಮಾಡಲಾಗುವುದು. ರಂಗಭೂಮಿ ಏಳಿಗೆಗೆ ಜಿಲ್ಲಾ ಮಟ್ಟದಲ್ಲಿ ಶಿಬಿರ, ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.

ಹಿರಿಯ ಕವಿ ಪ್ರಕಾಶ ಕಡಪಟ್ಟಿ ಮಾತನಾಡಿ, ಲೇಖಕರ ಕೃತಿಚೌರ್ಯ ಮಾಡುವ ಪ್ರವೃತ್ತಿ ಇದೆ. ಚೌರ್ಯ ಮಾಡಬಾರದು. ಲೇಖಕರ ಅನುಮತಿ ಇಲ್ಲದೆ ಟೈಟಲ್ ಬದಲಾಯಿಸಬಾರದು. ನಾಟಕದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲು, ಪ್ರತಿಭಾವಂತರಿಗೆ ವೇದಿಕೆ ಒದಗಿಸಲು ಸಂಘವನ್ನು ಪ್ರಾರಂಭಿಸಲಾಗಿದೆ ಎಂದರು.

ವಿಜಯವಾಣಿ ಜಿಲ್ಲಾ ವರದಿಗಾರರ ಶಿವಾನಂದ ಹಿರೇಮಠ ಮಾತನಾಡಿ, ನಾಟಕ ಲೇಖಕರು ಅಸಂಘಟಿತರು. ಈಗ ಸಂಘಟನೆಯ ಮೂಲಕ ಒಂದಾಗಿರುವುದು ಉತ್ತಮ ಬೆಳವಣಿಗೆ. ಉತ್ತರ ಕರ್ನಾಟಕ ಭಾಗದ ಲೇಖಕರಿಗೆ ಉತ್ತಮ ವೇದಿಕೆ ಸಿಗುತ್ತಿಲ್ಲ ಎಂಬ ನೋವು ಇದೆ. ಸಂಘಟನೆಯ ಮೂಲಕ ಹಕ್ಕುಗಳನ್ನು ಪಡೆಯಬೇಕು ಎಂದರು.

ಸಂತೋಷ ನಾಯಕ, ರಾಜಮಹಮ್ಮದ ಮುಲ್ಲಾ, ಮಲ್ಲಿಕಾರ್ಜುನ ಮೇಟಿ, ಗೋವಿಂದಗೌಡ, ಮಂಜುನಾಥ ಹಿರೇಮಠ, ಎಚ್.ವೈ. ಮೇಟಿ, ಜಿ.ಎಂ. ಮೋಹನ, ಸದಾಶಿವ ಚನಾಲ್, ಮಲ್ಲಪ್ಪ ಹಿರೇಗೌಡರ, ಶಿವರುದ್ರಯ್ಯ ಹಿರೇಮಠ ಮತ್ತು ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net