ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

28 anr 1
ಹೊರಬೈಲು ಗ್ರಾಮದಲ್ಲಿ ಗ್ರಾಮ ಮುಖಂಡರ ಜತೆ ಚರ್ಚಿಸುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳು.
Published on

ಆಯನೂರು: ಸಾಮಾಜಿಕ ಬಹಿಷ್ಕಾರ ಆರೋಪ ಕೇಳಿ ಬಂದಿರುವ ಸಮೀಪದ ಹೊರಬೈಲು ಗ್ರಾಮಕ್ಕೆ ತಹಸೀಲ್ದಾರ್, ಡಿವೈಎಸ್ಪಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಜನಸಂಪರ್ಕ ಸಭೆ ಮಾಡಿತು.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಬಾರದು. ನಡೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು. ಆದರೆ ಈ ತರಹದ ಯಾವುದೇ ಘಟನೆಗಳು ನಡೆದಿಲ್ಲ ಎಂದು ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದ ಮುಖಂಡರು ವಾದಿಸಿದರು. ಆದರೆ ಆಧಿಕಾರಿಗಳು ಸಾಮಾಜಿಕ ಬಹಿಷ್ಕಾರದಂತಹ ಕ್ರಮಗಳು ಕಾನೂನು ಬಾಹಿರ. ಎಲ್ಲರೂ ಗ್ರಾಮದಲ್ಲಿ ಹೊಂದಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಡಿವೈಎಸ್‌ಪಿ ಸುರೇಶ್‌ಕುಮಾರ್, ತಹಸೀಲ್ದಾರ್ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಸೋಮಣ್ಣ, ತುಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುದರ್ಶನ್, ಕುಂಸಿ ಠಾಣೆಯ ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ಪಿಎಸ್‌ಐಗಳಾದ ಶಾಂತರಾಜ್, ರಮೇಶ್, ದಫೇದಾರ್ ಪ್ರಕಾಶ್, ಕುಂಸಿ ನಾಡಕಚೇರಿಯ ಆರ್‌ಐ, ಪಂಚಾಯಿತಿ ಕಾರ್ಯದರ್ಶಿ ಮಾನಸಾ, ಕೃಷ್ಣಮೂರ್ತಿ ಇತರರಿದ್ದರು.
ಅಂತರ ಜಾತಿ ವಿವಾಹವಾಗಿದ್ದಕ್ಕೆ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವವರ ಮೇಲೆ ಸೂಕ್ತ ಕ್ರಮ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಹೊರಬೈಲು ಗ್ರಾಮದ ಪ್ರೀತಿ ಕೋಂ ದಿನೇಶ್ ಎಂಬುವವರು ಕುಂಸಿ ಪೊಲೀಸರಿಗೆ ದೂರು ನೀಡಿದ್ದರು. ಜೋಗಿ ಜನಾಂಗದ ದಿನೇಶ್ ಮತ್ತು ನಾನು ಪ್ರೀತಿಸಿ ಜುಲೈ ತಿಂಗಳಲ್ಲಿ ಕುಟುಂಬಗಳ ಒಪ್ಪಿಗೆಯಂತೆ ಮದುವೆಯಾಗಿದ್ದೇವೆ. ಆದರೆ ಹೊರಬೈಲು ಸನ್ನಿವಾಸ ಗ್ರಾಮದ ನನ್ನ ಪತಿಯ ಜಾತಿ ಮುಖಂಡರು ಜೋಗಿ ಜಾತಿಯ ಕುಟುಂಬಗಳನ್ನು ಒಗ್ಗೂಡಿಸಿ ಮಾದಿಗ ಹೆಣ್ಣನ್ನು ಮದುವೆ ಮಾಡಿಕೊಂಡಿರುವ ನಮ್ಮ ಕುಟುಂಬವನ್ನು ಬಹಿಷ್ಕಾರ ಹಾಕಬೇಕೆಂದು ತೀರ್ಮಾನಿಸಿದ್ದಾರೆ. ನಮ್ಮ ಕುಟುಂಬದವರ ಜತೆ ಸೇರಬಾರದು, ಯಾವುದೇ ಸಾಮಾಜಿಕ ಕಾರ್ಯಗಳಲ್ಲಿ ಕುಟುಂಬದವರನ್ನು ಸೇರಿಸಬಾರದು. ಒಂದು ವೇಳೆ ಸೇರಿದರೆ ಒಂದು ಸಾವಿರ ರೂ. ದಂಡ ಹಾಕಲಾಗುವುದು, ಸೇರಿದವರನ್ನು ಹಿಡಿದು ಕೊಟ್ಟರೆ 500 ಇನಾಂ ನೀಡಲಾಗುವುದು ಎಂದು ತೀರ್ಮಾನಿಸಿ ನಮ್ಮ ಕುಟುಂಬಕ್ಕೆ ಅಘೋಷಿತ ಬಹಿಷ್ಕಾರ ಹಾಕಿರುತ್ತಾರೆ. ಮುಂದಿನ ತಿಂಗಳು ಗ್ರಾಮದಲ್ಲಿ ನಡೆಯುವ ಜೋಗಿ ಜನಾಂಗದ ಮನೆದೇವರ ಸಾಮೂಹಿಕ ಪೂಜಾ ಕಾರ್ಯಕ್ರಮಕ್ಕೂ ನಮ್ಮ ಕುಟುಂಬದವರನ್ನು ಸೇರಿಸಬಾರದೆಂಬ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರೀತಿ ಬುಧವಾರ ರಾತ್ರಿ ಕುಂಸಿ ಪೊಲೀಸರಿಗೆ ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net