ಬಿಜೆಪಿ ಟಿಕೆಟ್‌ಗೆ ‘ಸೋಷಿಯಲ್ ಮೀಡಿಯಾ ವಾರ್’

simha
Published on

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಅಭಿಮಾನಿಗಳು ಹಾಗೂ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮಾನಿಗಳ ನಡುವೆ ‘ಸೋಷಿಯಲ್ ಮೀಡಿಯಾ ವಾರ್’ ಪ್ರಾರಂಭಗೊಂಡಿದೆ.

‘ಸೋಷಿಯಲ್ ಮೀಡಿಯಾ ವಾರ್’ ನಡೆಸಬಾರದು ಎಂದು ಸಂಸದ ಪ್ರತಾಪ್ ಸಿಂಹ ಅಭಿಮಾನಿಗಳಿಗೆ ಪಕ್ಷದ ವರಿಷ್ಠರು ಸೂಚನೆ ನೀಡಿದರೂ ಜಿಲ್ಲೆಯಲ್ಲಿ ಪ್ರತಾಪ್ ಸಿಂಹ ಪರವಾಗಿ ಸೋಷಿಯಲ್ ಮೀಡಿಯಾ ವಾರ್ ಜೋರಾಗಿಯೇ ನಡೆಯುತ್ತಿದೆ. ನಗರದ ಬೋಗಾದಿ ವರ್ತುಲ ರಸ್ತೆಯ ಜಿಎಲ್‌ಎನ್ ಕನ್ವೆನ್ಷನ್ ಹಾಲ್‌ನಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಚುನಾವಣಾ ಉಸ್ತುವಾರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ‘ಸೋಷಿಯಲ್ ಮೀಡಿಯಾ ವಾರ್’ ನಡೆಸದಂತೆ ಮಾಡಿಕೊಂಡ ಮನವಿಗೆ ಪ್ರತಾಪ್ ಸಿಂಹ ಬೆಂಬಲಿಗರು ತಲೆ ಕೆಡಿಸಿಕೊಳ್ಳದೆ ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಸ್ವತಃ ಪ್ರತಾಪ್ ಸಿಂಹ ಅವರೇ ನನನ ಪರವಾಗಿ ಪ್ರತಿಭಟನೆ ನಡೆಸಬೇಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಡಿ ಎಂದು ಮನವಿ ಮಾಡಿಕೊಂಡರೂ ಅವರ ಬೆಂಬಲಿಗರು ‘ಸೋಷಿಯಲ್ ಮೀಡಿಯಾ ವಾರ್’ ಮುಂದುವರೆಸಿದ್ದಾರೆ.

ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಪ್ರತಾಪ್ ಸಿಂಹಗೆ ಈ ಬಾರಿಯೂ ಟಿಕೆಟ್ ನೀಡಬೇಕು. ಜಿಲ್ಲೆಯ ಅಭಿವೃದ್ಧಿಯ ಜತೆಗೆ ಕಾರ್ಯಕರ್ತರ ನೋವು ನಲಿವುಗಳಿಗೆ ಪ್ರತಾಪ್ ಸಿಂಹ ಸದಾ ಸ್ಪಂದಿಸುತ್ತಾರೆ. ಅವರಿಗೆ ಈ ಬಾರಿ ಟಿಕೆಟ್ ನೀಡಿದರೆ ನಿಶ್ಚಿತವಾಗಿ ಗೆದ್ದೇ ಗೆಲ್ಲುತ್ತಾರೆ. ಹಾಗಾಗಿ ಪಕ್ಷದ ವರಿಷ್ಠರು ಟಿಕೆಟ್ ನೀಡಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಪ್ರಶ್ನಿಸುತ್ತಿರುವ ಅಭಿಮಾನಿಗಳು:

ಪ್ರತಾಪ್ ಸಿಂಹ ಅವರಿಗೆ ಯಾವ ಕಾರಣಕ್ಕೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂಬುದನ್ನು ಪಕ್ಷದ ವರಿಷ್ಠರು ಸ್ಪಷ್ಟಪಡಿಸಬೇಕು. ಅವರು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದೇ ತಪ್ಪಾಯಿತೇ? ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರ ಪರವಾಗಿ ಧ್ವನಿ ಎತ್ತಿದ್ದು ತಪ್ಪಾಯಿತೇ ? ಒಕ್ಕಲಿಗ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ನೀಡುತ್ತಿಲ್ಲವೇ? ಕಾಂಗ್ರೆಸ್‌ಗೆ ಟಕ್ಕರ್ ನೀಡಿದ್ದಕ್ಕೆ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆಯೇ? ಹಿಂದುಳಗ ಪರವಾಗಿ ಮಾತನಾಡಿದ್ದಕ್ಕೆ ಅವರ ಟಿಕೆಟ್ ನೀಡುತ್ತಿಲ್ಲವೇ? ಬಡವರ ಟಿಪ್ಪು ರೈಲನ್ನು ಒಡೆಯರ್ ರೈಲು ಬದಲಾಯಿಸಿದ್ದಕ್ಕೆ ಎಂದು ಪ್ರತಾಪ್ ಸಿಂಹಗೆ ಟಿಕೆಟ್ ಇಲ್ವಾ? ಬಡವರ ಮನೆಯ ಮಕ್ಕಳು ರಾಜಕೀಯದಲ್ಲಿ ಬೆಳೆಯಬಾರದ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಯದುವೀರ್ ಸ್ಪರ್ಧಿಸಿದರೆ ತಪ್ಪೇನು?:

ಸಂವಿಧಾನಕ್ಕೆ ತಲೆಬಾಗಿ ರಾಜಾಳ್ವಿಕೆಯನ್ನೇ ಬಿಟ್ಟುಕೊಟ್ಟ ರಾಜಮನೆತನದ ಕುಡಿ ಅದೇ ಸಂವಿಧಾನದ ಹಕ್ಕಿನಡಿ ಸರ್ಕಾರದ ಭಾಗವಾದರೆ ತಪ್ಪೇನು? ಮೈಸೂರು ರಾಜಮನೆತನದವರು ರಾಜಕೀಯಕ್ಕೆ ಬರುತ್ತಿರುವುದು ಇದು ಹೊಸತೇನು ಅಲ್ಲ. ದೇಶ ಸ್ವಾತಂತ್ರೃಗೊಂಡ ಸಂದರ್ಭ ಭಾರತದ ಒಕ್ಕೂಟ ಸರ್ಕಾರಕ್ಕೆ ಮೈಸೂರು ಸಂಸ್ಥಾನವನ್ನು ಅಂದಿನ ಮಹಾರಾಜರಾದ ಜಯಚಾಮರಾಜ ಒಡೆಯರ್ ವಿಲೀನ ಮಾಡಿ ರಾಜ್ಯಪಾಲರಾಗುವ ಮೂಲಕ ಅರಸೊತ್ತಿಗೆಯಿಂದ ಕೆಳಗಿಳಿದು ಪ್ರಜಾಸತ್ತೆಗೆ ಮರಳಿದರು. ಅಲ್ಲದೆ, ಜಯಚಾಮರಾಜ ಒಡೆಯರ್ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 6 ಬಾರಿ ಸ್ಪರ್ಧಿಸಿ 4 ಬಾರಿ ಸಂಸದರಾಗಿ ಗೆಲುವು ಸಾಧಿಸಿ ದ್ದರು. ಇದೀಗ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕೀಯ ರಂಗ ಪ್ರವೇಶಿಸಿದರೆ ತಪ್ಪೇನು ಎಂಬುದು ಯದುವೀರ್ ಅಭಿಮಾನಿಗಳ ಪ್ರಶ್ನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net