

ಹುಬ್ಬಳ್ಳಿ : ವಕೀಲ ವೃತ್ತಿಗೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯು ವೃತ್ತಿ ಜೀವನದ ಅಭಿವೃದ್ಧಿ ಜತೆಗೆ ಸಾಮಾಜಿಕ ಕಳಕಳಿಯನ್ನು ಸಹ ಹೊಂದಿರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ ಹೇಳಿದರು.
ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವದ್ಯಾಲಯದ ಕಾನೂನು ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಶಿಕ್ಷಕರ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಮಸ್ಯೆ ಉದ್ಬವಿಸಿದರೂ, ಪ್ರತಿಯೊಂದು ಸಮಸ್ಯೆಯನ್ನು ಎದುರಿಸುವ ಧೈರ್ಯ ಮತ್ತು ಛಲವನ್ನು ಮೈಗೂಡಿಸಿಕೊಂಡು, ನ್ಯಾಯಯುತವಾಗಿ ಶ್ರಮಿಸಿದರೆ ಗೆಲುವು ಖಚಿತ ಎಂದು ಸಲಹೆ ನೀಡಿದರು.
ಶಿಕ್ಷಕ ವೃತ್ತಿ ಸರಳವಾದದ್ದಲ್ಲ. ಯಾವುದೇ ಕ್ಷೇತ್ರವಾಗಲಿ ಶಿಕ್ಷಕನಿಲ್ಲದೆ ಅಭಿವೃದ್ಧಿಯಾಗದು ಮತ್ತು ಉತ್ತಮ ಸಮಾಜ ನಿರ್ವಣಕ್ಕೆ ಶಿಕ್ಷಕರ ಕೊಡುಗೆ ಅಪಾರ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು. ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಸಂಬಂಧವಿದ್ದಲ್ಲಿ ಸಮೃದ್ಧಿ ಸಮಾಜ, ಸುಸಂಸ್ಕೃತ ಪ್ರಜೆಯನ್ನು ಹುಟ್ಟಿಹಾಕಲು ಸಾಧ್ಯ ಎಂದು ತಿಳಿಸಿದರು.
ಡಾ. ಜಿ. ಬಿ. ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರತ್ನಾ ಭರಮಗೌಡರ ಸ್ವಾಗತಿಸಿದರು. ಅಪರ್ಣಾ ಪೂಜಾರ ನಿರೂಪಿಸಿದರು. ಅನುರಾಧಾ ವಸ್ತ್ರದ ವಂದಿಸಿದರು.