ಸಾಮಾಜಿಕ ನ್ಯಾಯ ನನ್ನ ಉಸಿರು, ಸಿದ್ದರಾಮಯ್ಯ

IMG-20231003-WA0032.jpg
Published on

ಬೆಳಗಾವಿ: ನಾನು ಯಾವತ್ತೂ ಜಾತಿ ಮಾಡುವವನಲ್ಲ. ಸಾಮಾಜಿಕ ನ್ಯಾಯ ನನ್ನ ಉಸಿರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ನೆಹರೂ ನಗರದ ಜಿಲ್ಲಾ ಕ್ರೀಡಾ ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕುರುಬ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಮಾಜದ ಎಲ್ಲ ಜಾತಿ-ವರ್ಗದ ಜನಗಳು ಸಂಘಟಿತರಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಅವಕಾಶ ವಂಚಿತ ಜಾತಿಗಳ ಜನ ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಸಮಾವೇಶ ನಡೆಸುವುದು ತಪ್ಪಲ್ಲ ಎಂದು ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಹೇಳಿದ್ದರು. ಅದರಂತೆ ಈ ಸಮಾವೇಷ ನಡೆಯುತ್ತಿದೆ ಎಂದರು.

ನಾನು ಈ ಜಾತಿ ವ್ಯವಸ್ಥೆಗೆ ಯಾವತ್ತಿದ್ದರೂ ವಿರುದ್ಧ. ಆದರೆ ಅಶಕ್ತ ಜನ ಸಮುದಾಯಗಳು ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತರಾಗುವುದು ತಪ್ಪಲ್ಲ ಎಂದು ನಂಬಿದ್ದೇನೆ ಎಂದರು.

ನಮ್ಮ ಸಮುದಾಯಕ್ಕೆ ರಾಜಕೀಯ ಇತಿಹಾಸ ಇದೆ. ಸಂಸ್ಕೃತಿಕ ಭವ್ಯತೆ ಇದೆ. ಹಕ್ಕ-ಬುಕ್ಕರಿಂದ ಹಿಡಿದು ಅಹಲ್ಯಾಬಾಯಿ ಹೋಲ್ಕರ್ ವರೆಗೂ ನಮಗೊಂದು ಚರಿತ್ರೆ ಇದೆ. ಆದರೆ ಸಂಘಟನೆ ಇಲ್ಲದಿದ್ದರಿಂದ ನಮಗೆ ಸಲ್ಲಬೇಕಾಗಿದ್ದು ಸಲ್ಲುತ್ತಿರಲಿಲ್ಲ ಎಂದರು.

ಪ್ರತಿ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆದರೆ ಮಾತ್ರ ಸಮಸಮಾಜದ ನಿರ್ಮಾಣ ಸಾಧ್ಯ. ಎಲ್ಲರಿಗೂ ಅವರವರ ಪಾಲಿನ ಅಧಿಕಾರ, ಅವಕಾಶ ಸಿಗಬೇಕು. ಈ ಸಾಮಾನ್ಯ ಜ್ಞಾನ ನಮ್ಮನ್ನು ಟೀಕಿಸುವವರಿಗೆ ಇಲ್ಲವಾಗಿದೆ ಎಂದರು.

ನಮ್ಮದು ಹೇಳಿ ಕೇಳಿ ಜಾತಿ ಮತ್ತು ತಾರತಮ್ಯದಿಂದ ಕೂಡಿರುವ ಸಮಾಜ. ಹೀಗಾಗಿ ಅವಕಾಶಗಳ ಹಂಚಿಕೆಯಲ್ಲೂ ತಾರತಮ್ಯ ಇರುತ್ತದೆ. ಇವನ್ನೆಲ್ಲಾ ಸರಿದೂಗಿಸಬೇಕಾದರೆ ಸಂಘಟನೆ, ಸಮಾವೇಶಗಳು ಅಗತ್ಯ ಎಂದರು.

ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ ಹಾಗೂ ಅರ್ಜುನಾಭಾಯಿಪುರಿ ಸ್ವಾಮೀಜಿಯವರುಗಳ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಸಮಾವೇಶ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ ಅಧ್ಯಕ್ಷ, ಮಾಜಿ ಸಚಿವ  ಎಚ್.ವಿಶ್ವನಾಥ್ ಆಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net