ಆದಿವಾಸಿಗಳಿಂದ ಸಾಮಾಜಿಕ ನ್ಯಾಯ

ಬೆಟ್ಟಕುರುಬ ಜನಾಂಗದ ಅಂಬಾಲ ದೇವಾಲೆ.
ಬೆಟ್ಟಕುರುಬ ಜನಾಂಗದ ಅಂಬಾಲ ದೇವಾಲೆ.
Published on

ಹುಣಸೂರು: ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಕಾಡಿನಿಂದ ಹೊರದಬ್ಬಿಸಿಕೊಂಡು ಇದೀಗ ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಸರ್ಕಾರಗಳಿಗೆ ದುಂಬಾಲು ಬಿದ್ದಿರುವ ಆದಿವಾಸಿ ಗಿರಿಜನರು ತಮ್ಮ ತಾತ, ಮುತ್ತಾತಂದಿರ ಕಾಲದಲ್ಲಿ ಪಂಚಪೀಠ ಸ್ಥಾಪನೆ ಮೂಲಕ ಸಾಮಾಜಿಕ ನ್ಯಾಯ ನೀಡುತ್ತಿದ್ದರು ಎನ್ನುವುದು ವಿಶೇಷ ಸಂಗತಿ.

12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ತಮ್ಮ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ಮತ್ತು ಸಮಾನತೆಯ ಪರಿಕಲ್ಪನೆ ನೀಡಿದ್ದರು. ಆದರೆ ಅದಕ್ಕೂ ಮೊದಲೇ ಆದಿವಾಸಿಗಳು ತಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸಾಮಾಜಿಕ ನ್ಯಾಯ ನೀಡಲು ಪಂಚಪೀಠ ಸ್ಥಾಪಿಸಿದ್ದರು ಎನ್ನುವುದಕ್ಕೆ ಈ ನೆಲದ ಮೂಲನಿವಾಸಿ ಸಮುದಾಯಗಳಲ್ಲಿ ಒಂದಾದ ಬೆಟ್ಟಕುರುಬ ಜನಾಂಗದ ಅಂಬಾಲ ದೇವಾಲೆ (ದೇವಾಲಯ)ಗಳಲ್ಲಿ ಕಾಣಬರುತ್ತಿದೆ.

ಆದಿವಾಸಿಗಳ ಪೈಕಿ ಬೆಟ್ಟಕುರುಬ ಜನಾಂಗ ಪುರಾತನ ಪರಂಪರೆ ಮತ್ತು ಇತಿಹಾಸ ಹೊಂದಿದ್ದು, ಅರಣ್ಯ ಮೂಲನಿವಾಸಿಗಳೆಂದು ಗುರುತಿಸಲ್ಪಟ್ಟಿದ್ದಾರೆ. ತಮ್ಮದೇ ಜಮ್ಮಕಾಡು(ವಾಸಸ್ಥಾನ)ಗಳಲ್ಲಿ ಶತಶತಮಾನಗಳಿಂದಲೂ ಸರಳ ಜೀವನ ಕ್ರಮದೊಂದಿಗೆ ಸೃಷ್ಟಿ ಪ್ರಕೃತಿಯನ್ನು ಆರಾಧಿಸುವುದರ ಜತೆಗೆ ವಿಶಿಷ್ಟ ಧಾರ್ಮಿಕ ಸಂಪ್ರದಾಯ, ನಂಬಿಕೆ, ಜ್ಞಾನ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆದಿವಾಸಿಗಳಲ್ಲಿ ಜೇನುಕುರುಬ, ಬೆಟ್ಟಕುರುಬ ಮತ್ತು ಪಣಿಯರ ಜನಾಂಗ ಮೂರು ಬೆಟ್ಟಗಳ ಮೂಲಕ ಬೆಳೆದು ಬಂದ ಸಮುದಾಯ ಎನ್ನುವುದು ಗಿರಿಜನರ ನಂಬಿಕೆ.

ಬೆಟ್ಟಕುರುಬರು ಸ್ವಾತಂತ್ರೃ ನಂತರದಲ್ಲಿ ಸರ್ಕಾರಗಳು ಮೀಸಲಾತಿ ಪಟ್ಟಿಯಲ್ಲಿ ಕಾಡುಕುರುಬ ಎಂಬ ಹೆಸರಿನೊಂದಿಗೆ ಇತರ ಜನಾಂಗಗಳ ಅನುಕೂಲಕ್ಕಾಗಿ ಸೇರಿಸುವ ಮೂಲಕ ಬೆಟ್ಟಕುರುಬ ಪದವನ್ನೇ ತೆಗೆದುಹಾಕಲಾಗಿತ್ತು. ಒಂದೆಡೆ ಅರಣ್ಯದಿಂದ ಹೊರದೂಡಲ್ಪಟ್ಟು ಬದುಕಿಗಾಗಿ ಬಡಿದಾಡಿಕೊಳ್ಳುವ ಪರಿಸ್ಥಿತಿ ಇದ್ದು, ಮತ್ತೊಂದೆಡೆ ತಮ್ಮ ಸಮುದಾಯದ ಹೆಸರನ್ನೇ ಕಿತ್ತುಹಾಕಿ ಅತಂತ್ರರನ್ನಾಗಿಸಿದ ಸರ್ಕಾರಗಳ ವಿರುದ್ಧ ಹೋರಾಟ ನಡೆಸಬೇಕಿತ್ತು. ಸತತ ಹೋರಾಟಗಳ ನಂತರ ಇದೀಗ ಕೇಂದ್ರ ಸರ್ಕಾರ ಎಸ್‌ಟಿ ಪಟ್ಟಿಯಲ್ಲಿ ಬೆಟ್ಟಕುರುಬ ಎನ್ನುವ ಪದವನ್ನು ಮತ್ತೆ ಸೇರಿಸಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಇನ್ನು ಮಾರ್ಪಾಡು ಮಾಡಿಲ್ಲ ಎಂದು ರಾಜ್ಯ ಕಾನೂನು ಸೇವೆಗಳ ಸಮಿತಿಯ ಮಾಜಿ ಸದಸ್ಯ ಹಾಗೂ ಬೆಟ್ಟಕುರುಬ ಸಮಾಜದ ಹಿರಿಯ ನಾಯಕ ವಿಠಲ್ ನಾಣಾಚ್ಚಿ ಬೇಸರಿಸುತ್ತಾರೆ.

ಇಂತಹ ಬೆಟ್ಟಕುರುಬ ಜನಾಂಗದ ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಪಂಚಪೀಠಗಳ ಮೂಲಕ ಹಾಡಿಯ ಜನರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ ನೀಡುತ್ತಿತ್ತು ಎನ್ನುವುದನ್ನು ಕೇಳಿದಾಗ ಇಂದಿನ ಆಧುನಿಕ ಸರ್ಕಾರಗಳು ನಾಚಿಕೆ ಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. ಶ್ರೇಷ್ಠ ಪರಂಪರೆಯೊಂದಿಗೆ ನ್ಯಾಯಯುತ ಸಾಮಾಜಿಕ ಸಮಾನತೆಯನ್ನು ಅಂದಿನ ಕಾಲದಲ್ಲೇ ಬೆಟ್ಟಕುರುಬರು ತಮ್ಮ ಶ್ರದ್ಧಾಕೇಂದ್ರ ವಾದ ಅಂಬಾಲ ದೇವಾಲೆ(ಅಂಬಾಲ ದೇವಾಲಯ)ಯಲ್ಲಿ ಅನುಷ್ಠಾನಗೊಳಿಸಿದ್ದರು ಎನ್ನುವುದು ಕೌತುಕದೊಂದಿಗೆ ಅವರ ಆಡಳಿತಾತ್ಮಕ ನೀತಿಗೆ ಪ್ರತೀಕವಾಗಿ ನಿಂತಿದೆ.

ಅಂಬಾಲ ದೇವಾಲೆ: ಬೆಟ್ಟಕುರುಬರು ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಹಾಡಿಗಳಲ್ಲಿ ವಾಸವಾಗಿದ್ದಾರೆ. ಪಶ್ಚಿಮಘಟ್ಟಗಳ ಸರಮಾಲೆಯ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಗಿರಿಶಿಖರಗಳಲ್ಲಿ ಹುಟ್ಟಿಬಂದ ಪರಂಪರೆ ಇದಾಗಿದೆ. ಬೆಟ್ಟಕುರುಬ ಭಾಷೆಯನ್ನು ಇವರು ತಾಯಿಭಾಷೆಯಾಗಿ ಅನುಸರಿಸುತ್ತಿದ್ದಾರೆ. ತಮಿಳು, ಮಲಯಾಳಂ ಮತ್ತು ತುಳು ಭಾಷೆಯನ್ನು ಒಳಗೊಂಡ ಭಾಷೆ ಬೆಟ್ಟಕುರುಬ ಭಾಷೆಯಾಗಿದೆ.

ಬೆಟ್ಟಕುರುಬರು ಪ್ರಕೃತಿ ಆರಾಧಕರು. ಮೂರ್ತಿಪೂಜೆ ಮಾಡುವುದಿಲ್ಲ. ಅವರು ದೇವಾಲಯವನ್ನು ಅಂಬಾಲ ದೇವಾಲೆ ಎಂದೇ ಸಂಬೋಧಿಸುತ್ತಾರೆ. ಅವರ ಅಂಬಾಲದಲ್ಲಿ ದೇವರ ವಿಗ್ರಹವಿರುವುದಿಲ್ಲ. ಧೂಪ ದೀಪ ಹಚ್ಚಿ ಪ್ರಕ್ರತಿಯನ್ನೇ ದೇವರೆಂದು ಪೂಜಿಸುತ್ತಾರೆ.

ಯುವಕರಿಗಾಗಿಯೇ ಮೀಸಲಿಟ್ಟ ಜಾಗ! ಅಂಬಾಲ ದೇವಾಲಯದ ಪೂರ್ವ ದಿಕ್ಕಿನಲ್ಲಿ ದೇವಾಲಯದ ಮಹಾದ್ವಾರ ಇರಿಸಲಾಗುತ್ತದೆ. ಮಹಾದ್ವಾರದ ಮೂಲಕ ದೇವಾಲಯ ಒಳಹೊಕ್ಕರೆ ಮೊದಲಾಗಿ ಯುವಜನರ ಪೀಠ ಎನ್ನುವ(ಬೆಟ್ಟಕುರುಬರ ಭಾಷೆಯಲ್ಲಿ ತಿರ್ಮುಂಭಪಟ ಅಥವಾ ಪೀಠ ಎನ್ನಲಾಗುತ್ತದೆ) ಇದ್ದು, ಹಾಡಿಯ ಯುವಕರಿಗಾಗಿಯೇ ಮೀಸಲಿಟ್ಟ ಜಾಗ ಇದು. ಪ್ರತಿ ದಿನ ದೇಗುಲದ ಸ್ವಚ್ಛತಾ ಕಾರ್ಯ, ಸಂಜೆ ಹೊತ್ತಲ್ಲಿ ಅಗ್ನಿಕುಂಡದಲ್ಲಿ ಬೆಂಕಿ ಹಾಕುವುದು ಸೇರಿದಂತೆ ಹಾಡಿಯಲ್ಲಿ ನಡೆಯುವ ಎಲ್ಲ ಕಾರ್ಯಗಳಿಗೆ ಬೆಂಬಲವಾಗಿ ಯುವಸಮೂಹ ನಿಲ್ಲಬೇಕು. ಯುವಜನರ ಪೀಠದ ನಂತರ ಅಗ್ನಿಕುಂಡ, ತದನಂತರ ದೇವಾಲೆ ಖಾನಿಪೀಠ ಸ್ಥಾಪಿಸಲಾಯಿತು. ಇದು ಬೆಟ್ಟಕುರುಬ ಮನೆತನದ ಹಿರಿಯ ವಯಸ್ಕರು ಖಾನಿ ಪೀಠದಲ್ಲಿ ಕುಳಿತು ಸಾಂಪ್ರದಾಯಿಕ ಆಚರಣೆ ಮಾಡುತ್ತಾರೆ. ಅಜ್ಜನ ಒಕ್ಕಣೆಯನ್ನು ಪಾಲಿಸುವುದು, ತಪ್ಪು ತೀರಿಸುವುದು, ಕುಲನ್ಯಾಯ ಪದ್ಧತಿ ನಿರ್ವಹಣೆ ಮುಂತಾದವುಗಳ ಮೂಲಕ ಹಿರಿಯರು ಪ್ರತೀಕವಾಗಿ ಪ್ರತಿನಿಧಿಸುತ್ತಾರೆ.

ಮೂರನೆಯ ಪೀಠ ನಾಡುಕೋಟೆ ಪೀಠ ಇರುತ್ತದೆ. ನಾಡುಕೋಟೆ ಪೀಠ ದೇವಾಲಯದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಇದ್ದು, ಹಾಡಿಯ ಜನರು, ನೆರೆಹೊರೆಯ ಹಾಡಿಗಳ ಪ್ರಮುಖರು, ಆಹ್ವಾನಿತರು, ಕುಲಸ್ಥರ ಪರ ವಕಾಲತ್ತು ವಹಿಸುವವರು ಇಲ್ಲಿ ಪಾಲ್ಗೊಂಡು ನ್ಯಾಯ ಕಾರ್ಯದಲ್ಲಿ ತುಲನಾತ್ಮಕ ವಿಮರ್ಶೆ, ಪರಾಮರ್ಶೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಂದರೆ ಹಾಡಿಯ ಎಲ್ಲ ಜನರೂ ಇಲ್ಲಿ ಜಮಾವಣೆಗೊಂಡು ಧಾರ್ಮಿಕ ಕಾರ್ಯದಿಂದ ನ್ಯಾಯ ಪಂಚಾಯಿತಿವರೆಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದೆ.

ನಾಲ್ಕನೆಯದಾಗಿ ದೇವಾಲೆ ಮುಜ್ಜ ಪೀಠ. ದೇವಾಲಯದ ಗುಡ್ಡಪ್ಪರು ನಿಲ್ಲುವ ಸ್ಥಳ ಇದಾಗಿದೆ. ಸಮಾಜದ ಧರ್ಮಪಾಲನೆ, ಪಾರಂಪರಿಕ ವೈಶಿಷ್ಟೃತೆ, ಕಟ್ಟುಪಾಡುಗಳನ್ನು ಶ್ರದ್ಧಾಭಕ್ತಿಯಿಂದ ನಿಭಾಯಿಸುವ ಕರ್ತವ್ಯ ಇವರದ್ದಾಗಿರುತ್ತದೆ. ಕುಲಾಚರಕ್ಕೆ ಧಕ್ಕೆ ಬಾರದಂತೆ ಎಲ್ಲರಿಗೂ ಸಮಾನ ಅವಕಾಶ ಮತ್ತು ಅನುಕೂಲಗಳನ್ನು ಮಾಡಿಕೊಡುವುದು ಮುಜ್ಜಪೀಠದಲ್ಲಿ ಆಸೀನರಾದವರು ಕರ್ತವ್ಯವಾಗಿರುತ್ತದೆ.

ಕೊನೆಯದಾಗಿ ಅಜ್ಜಿಪೀಠ ಎನ್ನುವ ಪೀಠದಲ್ಲಿ ಹಾಡಿಯ ಯಜಮಾನನ ಪತ್ನಿ ಇಡೀ ಹಾಡಿಯ ಮಹಿಳೆಯರನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ಇರುತ್ತಾರೆ. ಅಂಬಾಲದಲ್ಲಿ ಜರುಗುವ ಧಾರ್ಮಿಕ ಕಾರ್ಯಗಳಿಗೆ ಬೆಂಬಲವಾಗಿ ಮಹಿಳೆಯರೊಡಗೂಡಿ ಯಜಮಾನಿ ನಿಲ್ಲುತ್ತಾಳೆ. ದೇವಾಲದಯ ಪೂರ್ವಭಾಗದ ಮಧ್ಯದಲ್ಲಿ ಸತ್ಯಕಂಬವೊಂದನ್ನು ನೆಟ್ಟಿರುತ್ತಾರೆ. ಇದು ಸತ್ಯಕಂಬವಾಗಿದ್ದು, ಆಣೆ ಪ್ರಮಾಣ ಮಾಡುವವರು ಈ ಕಂಬವನ್ನು ಮುಟ್ಟಿ ಮಾಡುತ್ತಾರೆ.

ಹೀಗೆ ಬೆಟ್ಟಕುರುಬರು ಶತಶತಮಾನಗಳಿಂದಲೂ ಸಾಮಾಜಿಕ ನ್ಯಾಯದ ತಳಹದಿಯ ಮೇಲೆಯೇ ಸಮುದಾಯವನ್ನು ಮುನ್ನಡೆಸಿಕೊಂಡು ಬಂದಿರುವ ಪರಂಪರೆಯನ್ನು ಇಂದಿಗೂ ಉಳಿಸಿಕೊಂಡಿರುವುದು ವಿಶೇಷ. ಯುವಕರು, ಊರಿನ ಇತರರು, ಮಹಿಳೆಯರು, ಯಜಮಾನರು ಹೀಗೆ ಎಲ್ಲರಿಗೂ ಸಮಾನ ಅವಕಾಶ ನೀಡುವ ಮೂಲಕ ಸಾಮಾಜಿಕ ನ್ಯಾಯ ಜಾರಿಗೊಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಅಂಬಾಲ ಗುಡ್ಡಪ್ಪರಿಗೆ ಮಾಸಾಶನ ನೀಡಲಿ: ವಿಶಿಷ್ಟ ಪರಂಪರೆಯನ್ನು ಉಳಿಸಿಕೊಂಡಿರುವ ಬೆಟ್ಟಕುರುಬ ಸಮಾಜದ ಅಂಬಾಲದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಪೂರ್ವಜರು ಅಂದಿನ ಕಾಲದಲ್ಲೇ ನೀಡಿದ್ದರು. ಇಂದಿಗೂ ಅದನ್ನು ಉಳಿಸಿಕೊಂಡು ಬರುತ್ತಿದ್ದೇವೆ. ಸರ್ಕಾರಗಳು ಎಲ್ಲ ಸಮಾಜದ ಧಾರ್ಮಿಕ ಶ್ರದ್ಧಾಕೇಂದ್ರಗಳಿಗೂ ಅನುದಾನಗಳ ಮಹಾಪೂರವನ್ನೇ ಹರಿಸುತ್ತಿದೆ. ನಮ್ಮ ಅಂಬಾಲ ದೇವಾಲಯದ ಗುಡ್ಡಪ್ಪ(ಅರ್ಚಕರು)ರಿಗೂ ಸರ್ಕಾರ ಮಾಸಾಶನ ನೀಡುವ ಮೂಲಕ ಅವರ ಬದುಕಿಗೆ ದಾರಿ ಮಾಡಿಕೊಡಲಿ.

ವಿಠಲ್ ನಾಣಾಚ್ಚಿ ಮಾಜಿ ಸದಸ್ಯ, ರಾಜ್ಯ ಕಾನೂನು ಸೇವೆಗಳ ಸಮಿತಿ, ನಾಣಾಚ್ಚಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net