

ಬೆಳಗಾವಿ(ರಾಮದುರ್ಗ): ಸಾಮಾಜಿಕ ನ್ಯಾಯ ಒದಗಿಸುತ್ತೇವೆ ಎನ್ನುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಡುಬಡತನದ ಯಾರೊಬ್ಬರಿಗೂ ಭೂಮಿ ಒಡೆತನ ಲಭಿಸಿರಲಿಲ್ಲ. ಈಗ ದಿಟ್ಟ ನಿರ್ಧಾರ ತೆಗೆದುಕೊಂಡು ಎಲ್ಲರಿಗೂ ಹಕ್ಕುಪತ್ರ ನೀಡುತ್ತಿದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಮದುರ್ಗ ತಾಲೂಕಿನ ಬಟಕುರ್ಕಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಸಮಾವೇಶದಲ್ಲಿ ಮಾತನಾಡಿದ ಅವರು, ಅನೇಕ ಕಾನೂನು ತೊಡಕು ಪರಿಹರಿಸಿ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ಕುರುಬರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಕಾಡಂಚಿನಲ್ಲಿ ಹಾಗೂ ಖಾಸಗಿ ಜಾಗದಲ್ಲಿ ವಾಸವಿರುವ ಜನರಿಗೂ ಹಕ್ಕುಪತ್ರ ನೀಡಲು ಸರ್ಕಾರ ಬದ್ಧವಿದೆ. ಸರ್ಕಾರಿ ಯೋಜನೆ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವುದರ ಜತೆಗೆ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಪರಿಶಿಷ್ಟ ಜಾತಿ/ಪಂಗಡಗಳ ಜನರ ಬಹುದಿನಗಳ ಬೇಡಿಕೆಯಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಅದನ್ನು ಸಂವಿಧಾನದ ಷೆಡ್ಯೂಲ್-9 ರಲ್ಲಿ ಸೇರ್ಪಡೆಗೊಳಿಸಲಾಗುವುದು. ಮೀಸಲಾತಿ ಹೆಚ್ಚಿಸುವ ನಿರ್ಧಾರ ಜೇನುಗೂಡಿಗೆ ಕೈಹಾಕಿದಂತೆ ಅನೇಕ ಜನರು ಎಚ್ಚರಿಸಿದರೂ ಲೆಕ್ಕಿಸದೆ ಜೇನುಗೂಡಿಗೆ ಕೈಹಾಕಿ ಅದರಲ್ಲಿನ ಜೇನು ತೆಗೆದು ಜನರಿಗೆ ಕೊಡುವ ಧೈರ್ಯ ನಮ್ಮ ಸರ್ಕಾರ ಮಾಡಿದೆ ಎಂದು ಸಮರ್ಥಿಸಿಕೊಂಡರು.
ಶಾಸಕ ಮಹಾದೇವಪ್ಪ ಯಾದವಾಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಜಿಪಂ ಸಿಇಒ ಹರ್ಷಲ್ ಭೋಯರ್, ಎಸ್ಪಿ ಡಾ.ಸಂಜೀವ ಪಾಟೀಲ, ಬಟಕುರ್ಕಿ ಗ್ರಾಪಂ ಅಧ್ಯಕ್ಷೆ ವೀಣಾ ಬೈಲಗಾಣದ ಇತರರಿದ್ದರು.