

ವಿಜಯವಾಣಿ ಸುದ್ದಿಜಾಲ ಕೋಲಾರ
ಮೂರು ದಶಕಗಳಿಂದ ವಾಣಿಜ್ಯ ಮಳಿಗೆಗಳ ಹರಾಜು ನಡೆಯದೆ ಅವಕಾಶ ವಂಚಿತರಾದವರಿಗೆ ಸಾಮಾಜಿಕ ನ್ಯಾಯ, ಸಮಾನತೆ ದೊರಕಿಸುವ ದಿಸೆಯಲ್ಲಿ ಸರ್ಕಾರದ ಸೂಚನೆಯನ್ವಯ ಪಾರದರ್ಶಕವಾಗಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಿ. ಸತ್ಯವತಿ ಹೇಳಿದರು.
ನಗರಸಭೆ ಅವರಣದಲ್ಲಿ ಮಂಗಳವಾರದಿಂದ 19ರವರೆಗೆ ನಡೆಯುಲಿರುವ ವಾಣಿಜ್ಯ ಸಂಕೀರ್ಣದ 326 ಮಳಿಗೆಗಳ ಸಾರ್ವಜನಿಕ ಬಹಿರಂಗ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಎಸ್ಸಿ, ಎಸ್ಟಿ, ಅಂಗವಿಕಲರು, ಮಹಿಳೆಯರು ಹಾಗೂ ಸಾಮಾನ್ಯರು ಸೇರಿ ಎಲ್ಲರಿಗೂ ಸಮಾನ ಅವಕಾಶ ಒದಗಿಸಲು ಮಳಿಗೆಗಳ ಬಹಿರಂಗ ಹರಾಜು ಕರೆಯಲಾಗುತ್ತಿದೆ ಎಂದರು.
ಬಹಿರಂಗ ಹರಾಜು ಸಂಬಂಧ ಕೆಲ ಬಾಡಿಗೆದಾರರು ಹೈಕೋರ್ಟ್ ಮೊರೆ ಹೋಗಿದ್ದಕ್ಕೆ ಕೆವಿಯೆಟ್ ಹಾಕಿದ್ದೇವೆ. ದಾಖಲೆ ಪರಿಶೀಲಿಸಿ ಕೋರ್ಟ್ ಹರಾಜಿಗೆ ಅನುಮತಿಸಿದೆ. ಕೆಲವರು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಅವಕಾಶ ನೀಡಬಾರದು ಎಂದು ಕಿವಿಮಾತು ತಿಳಿಸಿದರು.
ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ಕೆಲವರು ಬಿಡ್‌ದಾರರನ್ನು ದಾರಿ ತಪ್ಪಿಸಲು ಹರಾಜಿಗೆ ವಿರುದ್ಧ ಕರಪತ್ರ ಹಂಚುತ್ತಿದ್ದು, ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.
ಅಂಗವಿಕಲರಿಗೆ ಮೀಸಲಿಟ್ಟಿದ್ದ ಕಾಳಮ್ಮಗುಡಿ ರಸ್ತೆಯಲ್ಲಿ ಚಂದ್ರ ಮೌಳೇಶ್ವರ ಕಾಂಪ್ಲೆಕ್ಸ್‌ನಲ್ಲಿ ಅಂಗಡಿ ಸಂಖ್ಯೆ 6, ಎಂಜಿ ರಸ್ತೆಯ ಎಸ್.ಎಸ್. ಕಾಂಪ್ಲೆಕ್ಸ್ ಮಳಿಗೆ ಸಂಖ್ಯೆ 9ಕ್ಕೆ 23 ಬಿಡ್‌ದಾರರು ಭಾಗವಹಿಸಿದ್ದರಿಂದ ಚೀಟಿ ಎತ್ತುವ ಮೂಲಕ ಜಿಲ್ಲಾಧಿಕಾರಿಗಳು ಹಂಚಿಕೆ ಮಾಡಿ ಕ್ರಮವಾಗಿ ಲಕ್ಷ್ಮೀ ನಾರಾಯಣ ಮತ್ತು ಪ್ರಮೀಳಾ ಅವರಿಗೆ ಅದೃಷ್ಟ ಒಲಿಯಿತು.
ಹರಾಜು ಪ್ರಕ್ರಿಯೆ: ಮಳಿಗೆಗಳನ್ನು ಮಾಸಿಕ ಬಾಡಿಗೆ ಹಾಗೂ ಮರುಪಾವತಿ ಠೇವಣಿ ಮೇಲೆ ಹರಾಜು ಕೂಗಲಾಯಿತು. ಹರಾಜು ಪ್ರಕ್ರಿಯೆಯಲ್ಲಿ ಮಾಸಿಕ ಬಾಡಿಗೆ ಗರಿಷ್ಠ 22,000 ರೂ. ಹಾಗೂ ಮರುವಾಪತಿ ಠೇವಣಿ ಮೊತ್ತ 16 ಲಕ್ಷ ರೂ. ಮೇಲ್ಪಟ್ಟು ಹರಾಜು ಕಂಡಿದೆ. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ. ರಂಗಸ್ವಾಮಿ, ನಗರಸಭೆ ಸದಸ್ಯರಾದ ಅಂಬರೀಷ್, ಕೆ.ಎಂ. ಮಂಜುನಾಥ್, ವಿ.ಮಂಜುನಾಥ್. ರಾಕೇಶ್, ನಾರಾಯಣಮ್ಮ, ಕಂದಾಯ ನಿರೀಕ್ಷಕ ತ್ಯಾಗರಾಜ್ ಇತರರಿದ್ದರು.
ಕರಪತ್ರ ಹಂಚಿಕೆ: ಮಳಿಗೆಗಳನ್ನು 2015ರಲ್ಲಿ 12 ವರ್ಷಗಳ ಅವಧಿಗೆ ನವೀಕರಣ ಮಾಡಿದ್ದು, ಇನ್ನು 7 ವರ್ಷ ಬಾಕಿಯಿದೆ. ನಗರಸಭೆ ಕ್ರಮದ ವಿರುದ್ಧ ಕೋರ್ಟ್‌ಗೆ ಮೊರೆ ಹೋಗಿದ್ದು, ಇತ್ಯರ್ಥವಾಗುವವರೆಗೆ ಹಾಲಿ ಹರಾಜು ಕೂಗುವವರಿಗೆ ಹಕ್ಕು ದೊರೆಯುವುದಿಲ್ಲವೆಂದು ಕರಪತ್ರ ಮುದ್ರಿಸಿ ಮಳಿಗೆಯ ಕೆಲ ಬಾಡಿಗೆದಾರರು ನಗರಸಭೆ ಆವರಣದಲ್ಲಿ ಹಂಚುತ್ತಿದ್ದರು.
ಪೊಲೀಸರೊಂದಿಗೆ ವಾಗ್ವಾದ: ನಿಗದಿತ ಸಮಯದೊಳಗೆ ಹಾಜರಿದ್ದವರಿಗೆ ಹರಾಜಿನಲ್ಲಿ ಪಾಲ್ಗೊಳ್ಳಲು ಟೋಕನ್ ನಂಬರ್ ನೀಡಲಾಗಿತ್ತು. ತಡವಾಗಿ ಬಂದವರು ಅವಕಾಶಕ್ಕಾಗಿ ಪೊಲೀಸರ ಜತೆ ವಾಗ್ವಾದಕ್ಕೆ ಇಳಿದಿದ್ದರು. ಪೌರಾಯುಕ್ತರು ಅವಕಾಶ ನಿರಾಕರಿಸಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗದಿದ್ದಾಗ ಸಿಪಿಐ ರಂಗಶಾಮಯ್ಯ ಖಡಕ್ ಎಚ್ಚರಿಕೆ ನೀಡಿ ಬಾಯಿ ಮುಚ್ಚಿಸಿದರು. ಹರಾಜು ಪ್ರಕ್ರಿಯೆ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದ ಬಾಡಿಗೆದಾರರ ಪೈಕಿ ಕೆಲವರು ಹರಾಜಿಗೆ ಕೋರ್ಟ್‌ನಿಂದ ತಡೆಯಾಜ್ಞೆ ಸಿಕ್ಕಿದೆ ಎಂದು ಮಧ್ಯಾಹ್ನ 12.15ರ ವೇಳೆಗೆ ಕೂಗು ಹಾಕಿದ್ದರಿಂದ ಮಳಿಗೆಯ ಹಾಲಿ ಬಾಡಿಗೆದಾರರು ಕರಡಾತನ ವ್ಯಕ್ತಪಡಿಸಿ ಹರಾಜು ಪ್ರಕ್ರಿಯೆ ನಿಲ್ಲಿಸುವಂತೆ ಕೂಗಿದರಾದರೂ ಕೋರ್ಟ್ ಆದೇಶ ಪ್ರತಿ ಹಾಜರುಪಡಿಸಿರಲಿಲ್ಲವಾದ್ದರಿಂದ ಹರಾಜು ಪ್ರಕ್ರಿಯೆ ನಿರಾತಂಕವಾಗಿ ಮುಂದುವರಿದಿತ್ತು.