

ಚಿತ್ರದುರ್ಗ: ಮೀಸಲಾತಿ ಹಂಚಿಕೆಯಿಂದ ಸಹೋದರ ಜಾತಿಗಳಲ್ಲಿ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ನೆಪವೊಡ್ಡಿ ಹಂಚದಿರುವುದು ಸಾಮಾಜಿಕ ಅನ್ಯಾಯಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ನ್ಯಾಯ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಅಂಬಣ್ಣ ದೂರಿದರು.
ಸಾಮಾಜಿಕ ನ್ಯಾಯಕ್ಕಾಗಿ ಸದಾಶಿವ ಆಯೋಗದ ವರದಿ ಜಾರಿಗಾಗಿ ನಡೆಯುತ್ತಿರುವ ಜಾಥಾ ದಾವಣಗೆರೆ ಜಿಲ್ಲೆಯ ಹರಿಹರದಿಂದ ಗುರುವಾರ ಚಿತ್ರದುರ್ಗಕ್ಕೆ ಆಗಮಿಸಿದ ವೇಳೆ ಸ್ವಾಗತಿಸಲಾಯಿತು. ನಗರದ ಒನಕೆ ಓಬವ್ವ ವೃತ್ತದಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
ಮೀಸಲಾತಿ ವರದಿಯನ್ನು ಎಲ್ಲ ಪಕ್ಷಗಳ ಮುಖಂಡರು ಅವರ ರಾಜಕೀಯ ಚದುರಂಗದಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಎಸ್ಸಿ ಮೀಸಲಾತಿ ಹೆಚ್ಚಳದಿಂದ ಮಾದಿಗ ಜನಾಂಗಕ್ಕೆ ಯಾವುದೇ ಅನುಕೂಲವಾಗಿಲ್ಲ ಎಂದು ಅಸಮಧಾನ ಹೊರಹಾಕಿದರು.
ಬೆಂಗಳೂರಿನ ಸ್ವಾತಂತ್ರ ಉದ್ಯಾನದಲ್ಲಿ ಡಿ. 11ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭವಾಗಲಿದ್ದು, ಅಂತಿಮ ಪ್ರತಿಫಲ ಸಿಗುವವರೆಗೂ ಹಿಂಪಡೆಯುವುದಿಲ್ಲ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಯಿತು. ಚಿತ್ರದುರ್ಗದಲ್ಲಿ ತಂಗಿರುವ ಜಾಥಾ 2ರಂದು ಬೆಳಗ್ಗೆ 6ಕ್ಕೆ ಹಿರಿಯೂರಿನ ಕಡೆ ಪಯಣ ಬೆಳೆಸಲಿದೆ.
ಸಮಿತಿ ಜಿಲ್ಲಾಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆಂಗುಂಟೆ ಜಯಣ್ಣ, ವಕೀಲ ಬೆನಕನಹಳ್ಳಿ ಚಂದ್ರಪ್ಪ, ದೀಪಿ ಪ್ರೇಮಿನಾಥ್, ಏಕಾಂತಪ್ಪ, ಕೆರೆಯಾಗಳ ಹಳ್ಳಿ ತಿಪ್ಪೇಸ್ವಾಮಿ, ಮಾಳಪ್ಪನಹಟ್ಟಿ ಏಕಾಂತಪ್ಪ ಇತರರಿದ್ದರು.