

ಮೈಸೂರು: ಶಾಲಾ ಪಠ್ಯದಿಂದ ವಿದ್ಯಾರ್ಥಿಗಳಿಗೆ ಜ್ಞಾನ ಜಾಗತಿಕ ಲಭಿಸಿದರೆ, ಸಹ ಪಠ್ಯದಿಂದ ಸಾಮಾಜಿಕ ಜೀವನಾನುಭವ ಲಭಿಸುತ್ತದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ. ಸತೀಶ್ ಜವರೇಗೌಡ, ವಿದ್ಯಾರ್ಥಿಗಳಿಗೆ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಮೈಸೂರು ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಮೆಲ್ಲಹಳ್ಳಿ ವಲಯ ಮಟ್ಟದ ಪ್ರತಿಭಾ ಕಾರಂಜಿ’ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪಠ್ಯದ ನೀರಸತನ ಮತ್ತು ಒತ್ತಡ ನಿವಾರಿಸಿ, ಆಸಕ್ತಿದಾಯಕ ಕಲಿಕೆಯ ವಾತಾವರಣ ನಿರ್ಮಿಸಿ, ವಿದ್ಯಾರ್ಥಿಗಳಿಗೆ ಲವಲವಿಕೆಯ ಮನೋಲ್ಲಾಸ ನೀಡಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಯಾವುದೇ ಕೀಳರಿಮೆ ಮತ್ತು ಹಿಂಜರಿಕೆಯ ಮನೋಭಾವ ಇದ್ದರೆ, ಅದನ್ನು ತೊರೆದು ಆತ್ಮವಿಶ್ವಾಸದಿಂದ ಸ್ಪರ್ಧಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೋಬಳಿ ಕಾರ್ಯದರ್ಶಿ ಕುಮಾರ್ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ಗಟ್ಟಿಯಾಗುತ್ತದೆ. ಆದ್ದರಿಂದ, ಸೋಲು-ಗೆಲುವು ಬದಿಗಿಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭಾ ಪ್ರದರ್ಶನ ಮಾಡಬೇಕು ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಜಿ. ಮಹೇಶ್, ಎಸ್‌ಡಿಎಂಸಿ ಸದಸ್ಯ ಶಂಕರ್, ವಿವಿಧ ಶಾಲೆಯ ಮುಖ್ಯ ಶಿಕ್ಷಕರಾದ ಪಿ.ಎನ್. ವೀಣಾ, ಎನ್. ಅನುಪಮ, ಎಚ್.ಎ. ಗಿರೀಶ್, ಶಿವಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ದೀಪು ಇತರರು ಇದ್ದರು.
ಮೆಲ್ಲಹಳ್ಳಿ ವಲಯದ ವ್ಯಾಪ್ತಿಯ 14 ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.