ಶಾಂತಿ ಸೌಹಾರ್ಧತೆ ಬೆಳೆಸಿದರೆ ಐಕ್ಯತೆ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿಮತ

Social drama performance mandya
Published on

ಮಂಡ್ಯ: ಶಾಂತಿ, ಸೌಹಾರ್ಧತೆಯನ್ನು ಬೆಳೆಸಿದರೆ ಮಾತ್ರ ದೇಶದಲ್ಲಿ ಐಕ್ಯತೆ ಸಾಧ್ಯ. ಜತೆಗೆ ಸರ್ವರೂ ಸಮನ್ವಯತೆಯಿಂದ ಬದುಕಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿಪಾಯ ವ್ಯಕ್ತಪಡಿಸಿದರು.

ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕಲಾವಿದೆ ಮಂಜುಳಾ ಆಲದಹಳ್ಳಿ ನೇತೃತ್ವದ ಅರುಣೋದಯ ಕಲಾತಂಡ, ಹುಲುಗಪ್ಪ ಕಟ್ಟಿಮನಿ ಅವರ ಸಂಕಲ್ಪ ಮೈಸೂರು ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹೋಯೋಗದಲ್ಲಿ ಆಯೋಜಿಸಿದ್ದ ‘ಜತೆಗಿರುವನು ಚಂದಿರ’ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ವ ಜನಾಂಗದ ಮನಸ್ಸುಗಳನ್ನು ಗಟ್ಟಿಗೊಳಿಸಿದರೆ ದೇಶ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮತ್ತೊಮ್ಮೆ ಪ್ರಚೋಧನಾಕಾರಿಗಳೇ ಪ್ರಜ್ವಲಿಸುತ್ತವೆ. ಇದರಿಂದ ದೇಶದಲ್ಲಿ ಅಶಾಂತಿ ಮೂಡುತ್ತದೆ. ವ್ಯಕ್ತಿ, ಕುಟುಂಬ, ಸಮಾಜ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಾ ಹೋಗುತ್ತವೆ. ಆತಂಕವಾದಿಗಳ ಮತ್ತಷ್ಟು ಪ್ರಬಲರಾಗುತ್ತಾರೆ. ಸಮಾಜವನ್ನು ಸರ್ವನಾಶ ಮಾಡುತ್ತಾರೆ. ಇಂತಹ ಸನ್ನಿವೇಶಗಳ ನಡುವೆ ಸರ್ವಜನಾಂಗದ ಪ್ರೀತಿ, ಸಹಬಾಳ್ವೆ, ನೆಮ್ಮದಿಯ ಸಂದೇಶವನ್ನು ಸಾರುವ ’ಜತೆಗಿರುವನು ಚಂದಿರ’ ನಾಟಕದಂತ ಪ್ರದರ್ಶನಗಳು ಹೆಚ್ಚೆಚ್ಚು ನಡೆಯಲಿ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಲಿ ಎಂದರು.

ರಂಗ ನಿರ್ದೇಶಕಿ ಕೆ.ಆರ್.ಸುಮತಿ ಮಾತನಾಡಿ, ತಾಯಿಗೆ ಅತ್ಯುತ್ತಮ ಸ್ಥಾನಮಾನವನ್ನು ನೀಡುತ್ತೇವೆ. ಆದರೆ ಈ ವ್ಯವಸ್ಥೆ ಭ್ರೂಣದಲ್ಲೇ ಹೆಣ್ಣುಮಗುವಿನ ವಿರುದ್ದ ನಿಲ್ಲುವಷ್ಟು ಕ್ರೂರವಾಗಿದೆ. ಮಹಿಳೆಯರ ಸಮಾನತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ನುಡಿಯನ್ನು ನಡೆಯ ಜತೆ ಸಮನ್ವಯ ಮಾಡುವುದನ್ನು ಮರೆತು ಬಿಡುತ್ತೇವೆ. ನಮ್ಮ ನಡೆ-ನುಡಿಯ ಜೊತೆ ಸಮನ್ವಯತೆ ಇರಬೇಕು ಎಂದರು.

ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ, ದೇಶದಲ್ಲಿ ಐಕ್ಯತೆಯನ್ನು ಸಾಧಿಸಲು ಧರ್ಮ, ಜಾತಿ, ಮತ ಬಿಟ್ಟು ಒಗ್ಗಟ್ಟಿನಿಂದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಅರುಣೋದಯ ಕಲಾತಂಡದ ಗೌರವಾಧ್ಯಕ್ಷ ಜೆ.ಡಿ.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೆ ಮಂಜುಳಾ ಆಲದಹಳ್ಳಿ, ವಕೀಲ ಬಿ.ಟಿ.ವಿಶ್ವನಾಥ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ರೈತ ಸಂಘದ ಲತಾಶಂಕರ್, ನಿವೃತ್ತ ಶಿಕ್ಷಕಿ ರತ್ನ ಜೈನ್, ಜನಕಲಾರಂಗದ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ಇತರರಿದ್ದರು. ಇದೇ ವೇಳೆ ಪ್ರದರ್ಶನಗೊಂಡ ನಾಟಕ ಪ್ರೇಕ್ಷಕರನ್ನು ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net