ಸೋಷಿಯಲ್ ಡಿಸ್ಟೆನ್ಸ್​ ನಿರ್ವಹಿಸದೆ ವ್ಯಾಪಾರ ಮಾಡಿದ್ದಕ್ಕೆ ಕೇಸ್!: ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಿರುವ ಜನರ ನಡವಳಿಕೆಗೆ ಅಂಗಡಿ ಮಾಲೀಕರೇ ಹೊಣೆ

BRM CORONA 08 (1)
Published on

ಬೆಂಗಳೂರು: ಕರೊನಾ ಭೀತಿ ನಡುವೆಯೂ ಜನರು ಅನಗತ್ಯವಾಗಿ ರಸ್ತೆಗೆ ಇಳಿಯುವುದನ್ನು ಬಿಟ್ಟಿಲ್ಲ. ಪೊಲೀಸರು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದರೂ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಈ ನಿಟ್ಟಿನಲ್ಲಿಯೇ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಂಡಿರುವ ಪೊಲೀಸರು, ಅಂತರ ಕಾಯ್ದುಕೊಳ್ಳದೆ ವ್ಯಾಪಾರ ನಡೆಸುವ ಅಂಗಡಿ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸುತ್ತಿದ್ದಾರೆ.

ಮಹದೇವಪುರ ಮತ್ತು ಬೆಳ್ಳಂದೂರು ಠಾಣೆಯಲ್ಲಿ ಅಂಗಡಿ ಮಾಲೀಕರ ವಿರುದ್ಧ 4 ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಹೂಡಿ ಸರ್ಕಲ್ ಬಳಿ ಸಾಯಿಪ್ರಿಯ ಬೇಕರಿ ಮಾಲೀಕ ಶ್ರೀನಿವಾಸ್, ಗರುಡಾಚಾರಪಾಳ್ಯದ ಎಂಟಿಬಿ ಶಾಲೆ ಬಳಿ ದುರ್ಗಾಶ್ರೀ ಕಾಂಡಿಮೆಂಟ್ಸ್ ಮಾಲೀಕ ನವನೀತ್, ಮಹದೇವಪುರ ಮೇಲ್ಸೇತುವೆ ಬಳಿ ಇರುವ ಎಸ್​ಎಸ್ ತರಕಾರಿ ಅಂಗಡಿ ಮಾಲೀಕರು ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದರು. ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಜನರ ನಡುವೆ ಅಂತರವಿಡದ ಅಂಬಿಕಾ ಪ್ರಾವಿಜನ್ ಸ್ಟೋರ್ ಮಾಲೀಕ ಕಲ್ಯಾಣ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

25 ಸಾವಿರ ವಾಹನ ಜಪ್ತಿ: ಲಾಕ್​ಡೌನ್ ಗಂಭೀರವಾಗಿ ಪರಿಗಣಿಸದೆ ಅನಗತ್ಯವಾಗಿ ರಸ್ತೆಗೆ ಇಳಿದಿದ್ದ ಒಟ್ಟು 25,079 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಪೈಕಿ 23,401 ದ್ವಿಚಕ್ರ ವಾಹನ, 716 ತ್ರಿಚಕ್ರ ವಾಹನ ಹಾಗೂ 962 ನಾಲ್ಕು ಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆದಾಗ್ಯೂ ರಸ್ತೆಗಿಳಿಯುವ ವಾಹನ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇಂತಹವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕೈಗೊಳ್ಳಲಾಗುವುದು. ಪರಿಸ್ಥಿತಿಯನ್ನು ಜನರು ಅರ್ಥ ಮಾಡಿಕೊಂಡು ಸಹಕರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್​ರಾವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net