ಪರಿಸರ ಸುಸ್ಥಿತಿಯಲ್ಲಿರಲು ಸಾಮಾಜಿಕ ಕಳಕಳಿ ಅಗತ್ಯ

22HNL1 BHUMI DINA
Published on

ಹಾನಗಲ್ಲ: ಪ್ಲಾಸ್ಟಿಕ್ ಮುಕ್ತ ಭಾರತದ ಕನಸು ನನಸಾಗಿಸಿ, ಪ್ರತಿಯೊಬ್ಬರೂ ಸಾಮಾಜಿಕ ಕಳಕಳಿ ತೋರಿದರೆ ಪರಿಸರ ಸುಸ್ಥಿತಿಯಲ್ಲಿ ಉಳಿಯುತ್ತದೆ ಹಾಗೂ ಭೂಮಿ ಫಲವತ್ತತೆ ಹೆಚ್ಚಾಗುತ್ತದೆ ಎಂದು ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ಅನಿತಾ ಹೇಳಿದರು.

ಪಟ್ಟಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ವಿಶ್ವ ಭೂಮಿ ದಿನ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಕೃತಿ ವಿಕೋಪಕ್ಕೆ ನಮ್ಮ ತಪ್ಪುಗಳೇ ಕಾರಣವಾಗಿವೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಪರಿಸರ ನಾಶಗಳಿಂದಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಭೂಮಿ ಹಾಗೂ ಪ್ರಕೃತಿಯನ್ನು ರಕ್ಷಿಸುವ ಮೂಲಕ ಮಾನವ ಜನಾಂಗವನ್ನು ರಕ್ಷಿಸಿಕೊಳ್ಳುವ ಸಂಕಲ್ಪ ನಮ್ಮದಾಗಬೇಕು ಎಂದರು.

ಅರಣ್ಯ ಇಲಾಖೆ ಸಹಾಯಕ ಅರಣ್ಯಾಧಿಕಾರಿ ಶಿವಾನಂದ ತೋಡ್ಕರ್ ಮಾತನಾಡಿ, ಗಂಧದ ದೊಡ್ಡ ಸಂಪತ್ತುಳ್ಳ ಹಾನಗಲ್ಲ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಇದೀಗ ಹುಡುಕಿದರೆ ಗಂಧದ ಮರಗಳು ಸಿಗದಂಥ ಸ್ಥಿತಿ ಎದುರಾಗಿದೆ. ತಾಲೂಕಿನಲ್ಲಿ ಬೆಳೆಯುತ್ತಿದ್ದ ಶ್ರೀಗಂಧದಲ್ಲಿ ಶೇ.80 ಎಣ್ಣೆಯ ಅಂಶವಿತ್ತು. ಬೆಂಕಿ ಅವಘಡ, ಕಳ್ಳರ ಹಾವಳಿಯಿಂದ ನಾವು ಇಂಥ ಪ್ರಾಕೃತಿಕ ಸಂಪತ್ತನ್ನು ಕಳೆದುಕೊಂಡಿದ್ದೇವೆ. ದೇಶದಲ್ಲಿ ಈಗ ಕೇವಲ ಶೇ. 21ಮಾತ್ರ ಅರಣ್ಯ ಸಂಪತ್ತು ಉಳಿದಿದೆ. ಇದು ಶೇ. 33ಕ್ಕೂ ಅಧಿಕಗೊಂಡರೆ ಅದು ಸಮತೋಲನವಿದ್ದಂತೆ. ಪ್ಲಾಸ್ಟಿಕ್ ಮುಕ್ತ ಮನಸ್ಥಿತಿ ಸಮಾಜದಲ್ಲಿ ನಿರ್ವಣವಾಗಬೇಕು. ಈ ಭೂಮಿಯಲ್ಲಿ ಮನುಷ್ಯರಾಗಿ ವಾಸಿಸುವ ಅವಕಾಶ ನೀಡಿದ ದೇವರನ್ನು ಸಕಾರಾತ್ಮಕವಾಗಿ ನೆನೆಯೋಣ. ಆದರೆ, ಭೂಮಿಯನ್ನು ಕೃತಜ್ಞತೆಯ ಅರಿವಿಲ್ಲದೆ ಮನ ಬಂದಂತೆ ಹಾಳು ಮಾಡಿದರೆ ಅದು ಮನುಕುಲಕ್ಕೆ ಮಾರಕವಾಗುತ್ತದೆ. ಮುಂದಿನ ಪೀಳಿಗೆಗೆ ಕಾಡು ಉಳಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಟಿ.ಬಿ. ಸವಣೂರ, ಮನುಷ್ಯನೇ ತಾನು ಬಾಳಲು ಎಲ್ಲ ಸೌಕರ್ಯ ನೀಡಿದ ಭೂಮಿಗೆ ಮಾರಕವಾಗಿದ್ದಾನೆ. ಪ್ರಕೃತಿ ಉಳಿಸದಿದ್ದರೆ ಮನುಷ್ಯನೂ ಉಳಿಯಲಾರ. ದುಡ್ಡು ಗಳಿಸಬಹುದು, ಭೂಮಿ ಹೆಚ್ಚಾಗಲು ಸಾಧ್ಯವಿಲ್ಲ. ಎಲ್ಲ ಪ್ರಾಣಿ, ಪಕ್ಷಿ ಸಂಕುಲಕ್ಕೂ ಭೂಮಿಯೇ ಆಧಾರ. ಅದರೆ, ಭೂಮಿ, ಪ್ರಕೃತಿಯನ್ನು ಹಾಳು ಮಾಡುತ್ತಿರುವವನು ಮನುಷ್ಯ ಮಾತ್ರ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಸರ್ವನಾಶ ಖಂಡಿತ ಎಂದರು.

ಹಿರಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ. ವೆಂಕಟಪ್ಪ, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಸ್.ಕೆ. ಜನಾರ್ಧನ, ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್. ಕಾಳಂಗಿ, ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಎಂ. ರಾಜಶೇಖರ, ಇತರರಿದ್ದರು. ಉಪಸ್ಥಿತರಿದ್ದರು. ವಕೀಲ ವಿನಾಯಕ ಕುರುಬರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net