

ಮಡಿಕೇರಿ: ಅಕ್ಷರಗಳಿಗೆ ಮತ್ತು ಓದುವ ಹವ್ಯಾಸಕ್ಕೆ ತನ್ನದೇ ಆದ ಶಕ್ತಿ ಇದ್ದು, ಸಾಹಿತ್ಯದಿಂದಲೂ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಸಿನಿಮಾ ನಿರ್ಮಾಪಕಿ, ಸಹ ನಿರ್ದೇಶಕಿ, ನಟಿ ಹಾಗೂ ಬರಹಗಾರ್ತಿ ಈರಮಂಡ ಹರಿಣಿ ವಿಜಯ್ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದಲ್ಲಿ ನಡೆದ ವಿಕೆ೩ ಪಿಕ್ಚರ್ಸ್‌ನಡಿ ತಾವು ರಚಿಸಿರುವ ಮೂರನೇ ಪುಸ್ತಕ ವಾಸ್ತವ(ಮನಗಳ ಮಂಥನ) ಕಥಾ ಪುಂಜ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚೆಗೆ ಅಕ್ಷರಗಳಿಗಾಗಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕೈಬರಹಗಳನ್ನು ಮರೆಯುವ ಪರಿಸ್ಥಿತಿ ಎದುರಾಗಿದೆ. ಈ ಬೆಳವಣಿಗೆ ಒಳ್ಳೆಯದಲ್ಲ. ಕೈಬರಹಗಳಿಗೆ ತನ್ನದೇ ಆದ ಶಕ್ತಿ ಇದೆ, ಅಕ್ಷರಗಳನ್ನು ಯಾರೂ ಮರೆಯಬಾರದು. ಬರೆಯುವ ಮತ್ತು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಹರಿಣಿ ವಿಜಯ್ ಕರೆ ನೀಡಿದರು.
ಸಾಹಿತ್ಯದಿಂದಲೂ ಸಾಮಾಜಿಕ ಬದಲಾವಣೆಯನ್ನು ತರಲು ಸಾಧ್ಯವಿದೆ. ಓದುವ ಹವ್ಯಾಸ ಬೆಳೆಸಿಕೊಂಡಾಗ ಸಮಾಜದಲ್ಲಿ ಪರಿವರ್ತನೆಯನ್ನು ಕಾಣಬಹುದಾಗಿದೆ. ತಾವು ರಚಿಸಿರುವ ಮೂರನೇ ಪುಸ್ತಕ ವಾಸ್ತವದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ಮನದಾಳದ ಮಾತುಗಳನ್ನು ಅಕ್ಷರದ ರೂಪದಲ್ಲಿ ಹೊರ ಹಾಕಿದ್ದೇನೆ. ಹೆಣ್ಣಿನ ಕುರಿತು ಸಮಾಜದಲ್ಲಿ ಇಂದಿಗೂ ಮೂಢ ನಂಬಿಕೆಗಳಿವೆ. ಪುಸ್ತಕದಲ್ಲಿ ಒಟ್ಟು ೧೦ ಕಥೆಗಳಿದ್ದು, ಪ್ರತಿ ಕಥೆಯಲ್ಲೂ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದೇನೆ. ಪ್ರತಿಯೊಬ್ಬರು ಬರೆಯುವ ಮತ್ತು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ವಾಸ್ತವ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಮತ್ತು ಖ್ಯಾತಿಗಳಿಸಬೇಕು ಎನ್ನುವ ಆಕಾಂಕ್ಷೆಗಳು ಪ್ರತಿಯೊಬ್ಬರಲ್ಲೂ ಇರುತ್ತದೆ. ವಾಸ್ತವವಾಂಶಗಳನ್ನು ಧೈರ್ಯದಿಂದ ಎದುರಿಸಿದಾಗ ಮಾತ್ರ ಇದು ಸಾಧ್ಯ ಎಂದರು.
ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಮಾತನಾಡಿ, ಸಿನಿಮಾ ಅಥವಾ ಸಾಕ್ಷ್ಯಚಿತ್ರವಾಗಲು ಯೋಗ್ಯವಾಗಿರುವ ಅಗ್ನಿಯಾತ್ರೆಯಂತಹ ಅದ್ಭುತ ಕಾದಂಬರಿಯನ್ನು ರಚಿಸಿರುವ ಹರಿಣಿ ವಿಜಯ್ ಅವರು ಇದೀಗ ತಮ್ಮ ಉತ್ತಮ ಚಿಂತನೆ ಮತ್ತು ಕಲ್ಪನೆಗೆ ವಾಸ್ತವ ಪುಸ್ತಕದಲ್ಲಿ ಅಕ್ಷರದ ರೂಪ ನೀಡಿ ಯಶಸ್ವಿಯಾಗಿದ್ದಾರೆ ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ದಿನದಿಂದ ದಿನಕ್ಕೆ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಬರಹಗಾರರು ನಷ್ಟ ಅನುಭವಿಸುತ್ತಿದ್ದಾರೆ. ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರವೇ ಖುದ್ದು ಪುಸ್ತಕಗಳನ್ನು ಖರೀದಿಸಬೇಕು ಮತ್ತು ವಿದ್ಯಾರ್ಥಿ ನಿಲಯ ಹಾಗೂ ಗ್ರಂಥಾಲಯಗಳಿಗೆ ಹಂಚಬೇಕು ಎಂದು ಮನವಿ ಮಾಡಿದರು.
ಇಂದು ಹೆಚ್ಚಾಗಿ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇಲ್ಲಿ ಉತ್ತಮ ವಿಚಾರಗಳ ಬಗ್ಗೆ ಚರ್ಚಿಸದೆ ಮತ್ತೊಬ್ಬರನ್ನು ಟೀಕಿಸುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇನ್ನೊಬ್ಬರನ್ನು ನಿಂದಿಸುವುದು ಸಾಧನೆಯಲ್ಲ. ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ಮಹಿಳಾ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿರುವುದು ಸ್ವಾಗತಾರ್ಹ. ಕೆಲಸ ಮತ್ತು ಜೀವನದ ಜಂಜಾಟದ ನಡುವೆಯೂ ಮಹಿಳೆಯರು ಪುಸ್ತಕ ರಚನೆಗೆ ಆಸಕ್ತಿ ತೋರುತ್ತಿದ್ದಾರೆ, ಮಹಿಳಾ ಬರಹಗಾರರಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಿರಿ ಗನ್ನಡ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ಮಾತನಾಡಿ, ಕೊಡಗಿನಲ್ಲಿ ವೈಚಾರಿಕತೆಯ ಬರಹಗಳ ಕೊರತೆ ಇದೆ. ಇದನ್ನು ತುಂಬುವ ಪ್ರಯತ್ನವನ್ನು ಹರಿಣಿ ವಿಜಯ್ ಮಾಡುತ್ತಿದ್ದಾರೆ ಎಂದರು.
ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕೊಡವಕೇರಿಯ ನಿರ್ದೇಶಕಿ ಬೊಳ್ಳಜಿರ ಯಮುನಾ ಅಯ್ಯಪ್ಪ ಉಪಸ್ಥಿತರಿದ್ದರು.