

ನಾಯಕನಹಟ್ಟಿ: ಅಂತರ್‌ಜಾತಿ ವಿವಾಹವಾದ ದಂಪತಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದು ಕಾನೂನು ರೀತಿಯಲ್ಲಿ ಘೋರ ಅಪರಾಧ. ಸಮಾಜದ ಸ್ವಾಸ್ಥ್ಯ ಕದಡುವಂತಹ ಪ್ರಕರಣ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಸೋಮಶೇಖರ್ ಎಚ್ಚರಿಕೆ ನೀಡಿದರು.
ಸಮೀಪದ ಎನ್.ದೇವರಹಳ್ಳಿಯಲ್ಲಿ ನಡೆದ ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಶುಕ್ರವಾರ ಜಾಗೃತಿ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಬಹಿಷ್ಕಾರ, ದೌರ್ಜನ್ಯ ಪ್ರಕರಣ ಮರುಕಳುಹಿಸದಂತೆ ಕಾನೂನು ಕ್ರಮ ಕೈಗೊಳ್ಳಲಾವುದು. ಸಮಾಜದ ಸ್ವಾಸ್ಥ್ಯ ಹಾಳು ಮಾಡಿ, ಸಾಮರಸ್ಯಕ್ಕೆ ಧಕ್ಕೆ ತರುವಂತಹ ಘಟನೆಗಳು ನಡೆದರೆ ಅಂಥವರ ವಿರುದ್ಧ ಮೂಲಾಜಿಲ್ಲದೆ ಗಂಭೀರ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳಲ್ಲಿ ಗ್ರಾ.ಪಂ.ಸದಸ್ಯರಿದ್ದರೆ ಅವರ ಸದಸ್ಯತ್ವ ರದ್ದುಪಡಿಸಲಾಗುವುದು ಎಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಮಾತನಾಡಿ, ಸಂವಿಧಾನದಲ್ಲಿ ಸರ್ವರೂ ಸಮಾನರು ಎಂಬುದಾಗಿದೆ. ಕಾಲ ಬದಲಾಗಿದೆ. ಅನಿಷ್ಟ ಪದ್ಧತಿಗಳ ಆಚರಣೆಗಳನ್ನು ಕೈಬಿಟ್ಟು ಸಮಾನತೆ ಕಾಪಾಡಿಕೊಳ್ಳಿ. ಮಕ್ಕಳಿಗೆ ಶಿಕ್ಷಣ ನೀಡಿದರೆ ಇಂತಹ ಅನಿಷ್ಟ ಪದ್ಧತಿಗಳು ದೂರವಾಗುತ್ತವೆ. ಅವರಿಗೆ ಸಾಮಾಜಿಕ ಅರಿವು ಮೂಡಿಸುವ ಜವಾಬ್ದಾರಿ ನಿಮ್ಮದಾಗಿರುತ್ತದೆ ಎಂದು ತಿಳಿಸಿದರು.
ಡಿವೈಎಸ್‌ಪಿ ರಾಜಣ್ಣ ಮಾತನಾಡಿ, ಗ್ರಾಮದಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕು. ನಿಮ್ಮ ಜನಾಂಗದ ಆಚರಣೆಗಳೇನೇ ಇದ್ದರೂ ಸಮಾಜದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಬಹಿಷ್ಕಾರಕ್ಕೊಳಗಾದ ಯುವತಿಯನ್ನು ಶೀಘ್ರವೇ ಗ್ರಾಮಕ್ಕೆ ಕರೆತಂದು ಎಲ್ಲರಂತೆ ಬಾಳಲು ಅವಕಾಶ ನೀಡದಿದ್ದರೆ, ಬಹಿಷ್ಕಾರಕ್ಕೆ ಸಹಕರಿಸಿದವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮದ ಮುಖಂಡ ನಾಗರಾಜ್ ಮಾತನಾಡಿ, ಜೋಗಿ ಸಮುದಾಯದವರು ವರ್ಷಕ್ಕೊಮ್ಮೆ ಸೇರಿಕೊಂಡು ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಅಂತರ್ಜಾತಿ ವಿವಾಹಕ್ಕೆ ಬಹಿಷ್ಕಾರ ಹಾಕಿರುವುದು ಗ್ರಾಮದ ಮುಖಂಡರ ಗಮನಕ್ಕೆ ಬಂದಿಲ್ಲ. ಮಾಧ್ಯಮಗಳ ಮೂಲಕ ತಿಳಿದಿದೆ. ನಮ್ಮ ಊರಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳ ಸಮ್ಮುಖದಲ್ಲಿ ತಿಳಿಸಿದರು. ಸಾಂತ್ವಾನ ಕೇಂದ್ರದಲ್ಲಿರುವ ಸಾವಿತ್ರಮ್ಮ ಮತ್ತು ಅವರ ಒಂದು ತಿಂಗಳ ಮಗುವನ್ನು ಶನಿವಾರ ಗ್ರಾಮಕ್ಕೆ ಕರೆದುಕೊಂಡು ಬರಲಾಗುವುದು ಎಂದು ಗ್ರಾಮದ ಮುಖಂಡರು ಅಧಿಕಾರಿಗಳಿಗೆ ತಿಳಿಸಿದರು.
ತಹಸೀಲ್ದಾರ್ ರೆಹಾನ್‌ಪಾಷ, ವೃತ್ತ ನಿರೀಕ್ಷಕ ಸಮೀವುಲ್ಲಾ, ಗ್ರಾಪಂ ಸದಸ್ಯರು, ಮುಖ್ಯ ಶಿಕ್ಷಕರು ಜಾಗೃತಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರವಿಶಂಕರ್‌ರೆಡ್ಡಿ, ಬಿಇಒ ಕೆ.ಎಸ್.ಸುರೇಶ್, ಪಿಡಿಒ ಶಶಿಕಲಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.