ಸೆ.22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಪ್ರತಿ ಮನೆಗೆ ವಿಶಿಷ್ಟ ಸಂಖ್ಯೆ ನೀಡಿಕೆ

Caste Census
Published on

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವು ಸೆ.22ರಿಂದ ಅ.7ರವರೆಗೆ ನಡೆಯಲಿದೆ. 90 ದಿನಗಳಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹೇಳಿದೆ.

ಮೊದಲ ಹಂತದ ಸಮೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಕೆಲಸ, ಮನೆಪಟ್ಟಿ ಮತ್ತು ಅವುಗಳ ನಕ್ಷೆ ಸಿದ್ಧಪಡಿಸುವ ಕಾರ್ಯ ಒಳಗೊಂಡಿದೆ. ರಾಜ್ಯಾದ್ಯಂತ ಎಲ್ಲ ಮನೆಗಳ ಸಂಪೂರ್ಣ ಎಣಿಕೆ, ಅನುಕ್ರಮ ಸಂಖ್ಯೆ ನೀಡುವಿಕೆ ಮತ್ತು ಮ್ಯಾಪಿಂಗ್ ಕೆಲಸ ಮಾಡಲಾಗುತ್ತದೆ. ಎಲ್ಲ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವ ಹಿನ್ನೆಲೆಯಲ್ಲಿ ಆರ್‌ಆರ್ ಮೀಟರ್ ಆಧಾರದಲ್ಲಿ ಮನೆ ಗುರುತಿಸಿ ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಯೂ ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ. ಇದರಿಂದ 2ನೇ ಹಂತದ ಸಮೀಕ್ಷೆ ಕಾರ್ಯವನ್ನು ವ್ಯವಸ್ಥಿತ ಮತ್ತು ವೈಜ್ಞಾನಿಕವಾಗಿ ಕಾರ್ಯಗತಗೊಳಿಸಲು ಅನುಕೂಲವಾಗಲಿದೆ ಎಂದು ಆಯೋಗದ ಅಧ್ಯಕ್ಷ ಮಧುಸೂಧನ್ ಆರ್. ನಾಯ್ಕ ಶುಕ್ರವಾರ ಹೇಳಿದ್ದಾರೆ.

ದಸರಾ ರಜಾ ಅವಧಿಯಲ್ಲಿ ಈ ಸಮೀಕ್ಷೆ ನಡೆಯಲಿದೆ. ಈ ಅವಧಿಯಲ್ಲಿ ಶಾಲೆಗಳಿಗೆ ರಜೆ ಇರಲಿದೆ. ಆಯೋಗದ ಸದಸ್ಯರು ಸೇರಿ ಇಂಧನ ಇಲಾಖೆ ತಂಡ ಸಮೀಕ್ಷೆಗಾಗಿ, ವಿದ್ಯುಚ್ಛಕ್ತಿ ಮೀಟರ್ ಸಂಪರ್ಕ (ಆರ್‌ಆರ್ ಸಂಖ್ಯೆ) ಆಧಾರದಲ್ಲಿ ಆ್ಯಪ್ ವಿನ್ಯಾಸಗೊಳಿಸಿದೆ. ದೇಶದಲ್ಲಿ ಇದು ಮೊದಲ ಪ್ರಯತ್ನವಾಗಿದೆ. ಈ ಕ್ರಮದಿಂದ ತ್ವರಿತವಾಗಿ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ. ದೇಶದಲ್ಲೇ ನಮ್ಮ ರಾಜ್ಯ, ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಪ್ರಥಮ ಸ್ಥಾನದಲ್ಲಿದೆ. ಎಸ್ಕಾಂಗಳ ಮೀಟರ್ ರೀಡರ್, ಗ್ರಾಹಕರ ಮನೆ ಬಳಕೆ ವಿದ್ಯುತ್ ಸಂಪರ್ಕ ಮೀಟರ್ ಓದಿ ಬಿಲ್ಲಿಂಗ್ ಮಾಡುವ ಜೊತೆಗೆ ‘ಜಿಯೋ ಟ್ಯಾಗ್’ ಮಾಡಿ ಸಮೀಕ್ಷೆ ನಡೆಸಲಾಗುತ್ತದೆ ಎಂದರು.

ಪ್ರತಿ ಮನೆಗೆ ಸ್ಟಿಕ್ಟರ್: ಸಮೀಕ್ಷೆಯಲ್ಲಿ ದ್ವಿತೀಯ ದತ್ತಾಂಶ ಆಧರಿಸಿ ಮೌಲ್ಯೀಕರಿಸಿದ ನಂತರ ಮನೆಪಟ್ಟಿ ಅಂಶ ಸೇರಿಸಲಾಗುತ್ತದೆ. ಇದಕ್ಕಾಗಿ ಮ್ಯಾಪಿಂಗ್ ಮಾಡಲಾಗುತ್ತದೆ. ಅಭಿವೃದ್ಧಿಪಡಿಸಿದ ಅಪ್ಲಿಕೇಷನ್‌ನಲ್ಲಿ ‘ಮನೆ ಸ್ಥಳ’ವನ್ನು ಸೆರೆ ಹಿಡಿಯಲಾಗುತ್ತದೆ. ಅಪಾರ್ಟ್‌ಮೆಂಟ್ ಮತ್ತು ವಾಸಸ್ಥಳಗಳ ಕ್ಲಸ್ಟರ್ ಸೇರಿ ಪ್ರತಿ ಮನೆಗೆ ವಿಶಿಷ್ಟ ಸಂಖ್ಯೆ ನೀಡಲಾಗುವುದು. ‘ಬಿಲ್ಲಿಂಗ್ ಸೈಕಲ್’ನಲ್ಲಿ ಮೀಟರ್ ರೀಡರ್‌ಗಳು ಆ.23ರಿಂದ ಕೆಲಸ ಪ್ರಾರಂಭಿಸುತ್ತಾರೆ. ಇದನ್ನು ಆ್ಯಪ್‌ನಲ್ಲಿ ನಮೂದಿಸುತ್ತಾರೆ. ನಂತರ, ಪ್ರತಿ ಮನೆಗೂ ಸ್ಟಿಕ್ಕರ್ ಅಂಟಿಸುತ್ತಾರೆ. ಇದರಿಂದ ಸಮೀಕ್ಷಾದಾರರಿಗೆ ಮನೆ ಗುರುತಿಸಲು ಸುಲಭವಾಗುತ್ತದೆ. ಪ್ರಸ್ತಾವಿತ ಸಮೀಕ್ಷೆ ಎಲ್ಲ ಜನರ ದತ್ತಾಂಶ ಸೆರೆಹಿಡಿಯುವುದು ಮಾತ್ರವಲ್ಲದೆ ಅಂದಾಜು 7 ಕೋಟಿ ಜನರಿಗೆ ಕಲ್ಯಾಣ ಕಾರ್ಯಕ್ರಮ ತಲುಪಿಸಲು ಸಹಾಯವಾಗಲಿದೆ. ಸಮೀಕ್ಷೆ ಕಾರ್ಯ ಸುಗಮವಾಗಿ ನಡೆಯಲು ಜನರು ಸಹಕಾರ ನೀಡಬೇಕೆಂದು ಮಧುಸೂಧನ್ ನಾಯ್ಕ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net