

ಮಡಿಕೇರಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಸಂಬಂಧ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ. ಆ ದಿಸೆಯಲ್ಲಿ ಈ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಗಬೇಕಿದೆ ಎಂದರು.
ಯಾವುದೇ ಕುಟುಂಬವು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು. ಆ ಹಿನ್ನೆಲೆಯಲ್ಲಿ ಎಲ್ಲಾ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದರಿಂದ ವಾಸದ ಮನೆಗಳ ವಿದ್ಯುತ್ ಬಿಲ್ಲಿನ ಆರ್‌ಆರ್ ಸಂಖ್ಯೆ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿರುವ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಬೇಕಿದೆ. ಜೊತೆಗೆ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೂ ಸಹ ಗ್ರಾಮ ಆಡಳಿತ ಅಧಿಕಾರಿಗಳ ಮುಖಾಂತರ ಜಿಯೊ ಮ್ಯಾಪಿಂಗ್ ಮಾಡಬೇಕಿದೆ ಎಂದು ಹೇಳಿದರು.
ಇದರಿಂದ ಸಮೀಕ್ಷೆ ವ್ಯಾಪ್ತಿಯಿಂದ ಯಾರೂ ಹೊರಗುಳಿಯುವುದಿಲ್ಲ. ಜಿಲ್ಲೆಯಲ್ಲಿರುವ ಎಲ್ಲಾ ಮನೆಗಳ ವಿದ್ಯುತ್ ಮೀಟರ್ ರೀಡರ್‌ಗಳಿಂದ ಕುಟುಂಬಗಳ ಪಟ್ಟಿ ಮಾಡಿ, ಈ ಕುರಿತು ಮನೆಗಳಿಗೆ ಜಿಯೋ ಟ್ಯಾಗ್‌ಗಾಗಿ ಸ್ಟಿಕ್ಕರ್‌ಗಳನ್ನು ಅಳವಡಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ವಿದ್ಯುತ್ ಮೀಟರ್ ರೀಡರ್ ಸಿಬ್ಬಂದಿಯು ಆರ್‌ಆರ್ ನಂಬರ್ ಹೊಂದಿರುವ ಕುಟುಂಬಗಳ ಪಟ್ಟಿ ಮಾಡಲಿದ್ದಾರೆ. ಆ ಹಿನ್ನೆಲೆಯಲ್ಲಿ ಸಮೀಕ್ಷೆ ಕಾರ್ಯ ಮುಗಿಯುವವರೆಗೂ ತಮ್ಮ ಮನೆಗಳಿಗೆ ಅಂಟಿಸಲಾದ ಜಿಯೋ ಟ್ಯಾಗ್ ಸ್ಟಿಕ್ಕರ್‌ನ್ನು ತೆಗೆಯಬಾರದು ಎಂದು ಕೋರಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಸೆ.೨೨ ರಿಂದ ಆರಂಭವಾಗಿ ಅ.೭ ರೊಳಗೆ ಪೂರ್ಣಗೊಳಿಸಲಾಗುತ್ತದೆ. ಸಮೀಕ್ಷಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಸಮೀಕ್ಷೆಗಾಗಿ ವಿಶೇಷ ಆ್ಯಪ್ ನಿಗದಿಪಡಿಸಲಾಗಿದೆ. ಸುಮಾರು ೬೫ ಪ್ರಶ್ನಾವಳಿಗಳು ಇದ್ದು, ಕುಟುಂಬಗಳಿಂದ ಮಾಹಿತಿ ಪಡೆದು ಆ ಆ್ಯಪ್ ಮೂಲಕವೇ ಸಮೀಕ್ಷೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿನ ಒಟ್ಟು ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ ಪ್ರತೀ ಸಮೀಕ್ಷೆದಾರರು ಎಲ್ಲಾ ಮನೆಗಳಿಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ವಿದ್ಯುತ್ ಸಂಪರ್ಕ ಹೊಂದಿರುವ ಮನೆಗಳ ಒಟ್ಟು ಸಂಖ್ಯೆ ೧,೮೬,೦೦೫, ಕಾಲಂ(೨)ಕ್ಕೆ ಅನುಗುಣವಾಗಿ ಬೇಕಾಗಿರುವ ಮಾಸ್ಟರ್ ಟ್ರೈನರ್ಸ್‌ಗಳ ಒಟ್ಟು ಸಂಖ್ಯೆ ೨೫, ಅವಶ್ಯಕತೆಯಿರುವ ಮೇಲ್ವಿಚಾರಕರ ಒಟ್ಟು ಸಂಖ್ಯೆ ೬೨ ಹಾಗೂ ಅವಶ್ಯಕತೆಯಿರುವ ಗಣತಿದಾರರ ಒಟ್ಟು ಸಂಖ್ಯೆ ೧೨೪೦ ಆಗಿರುತ್ತದೆ ಎಂದು ವಿವರಿಸಿದರು.
ಸರ್ಕಾರದಿಂದ ಸಮೀಕ್ಷೆ ಕಾರ್ಯಕ್ಕಾಗಿ ಹೊಸದಾಗಿ ಸಿದ್ಧಪಡಿಸಿರುವ ಅಪ್ಲಿಕೇಶನ್ ಮುಖಾಂತರ ಸಮೀಕ್ಷೆ ಕಾರ್ಯವನ್ನು ದಸರಾ ರಜೆ ಅವಧಿಯಲ್ಲಿ ಅಂದರೆ ಸೆ.೨೨ ರಿಂದ ಅ.೭ ರವರೆಗೆ ನಡೆಯಲಿದೆ. ಜಿಲ್ಲಾ ಹಂತದಲ್ಲಿ ಆಯ್ಕೆ ಮಾಡಿದ ಮಾಸ್ಟರ್ ಟ್ರೈನರ್ಸ್‌ಗಳಿಗೆ ತರಬೇತಿ ನೀಡಲಾಗುವುದು. ತರಬೇತಿಯನ್ನು ಹೊಂದಿದ ಮಾಸ್ಟರ್ ಟ್ರೈನರ್ಸ್‌ಗಳಿಂದ ಮೇಲ್ವಿಚಾರಕರು ಮತ್ತು ಗಣತಿದಾರರಿಗೆ ತರಬೇತಿ ನೀಡಲಾಗುತ್ತದೆ ಎಂದರು.
ಈ ಸಮೀಕ್ಷಾ ಕಾರ್ಯಕ್ಕೆ ಸರ್ಕಾರದ ಆದೇಶದಂತೆ ಸಮೀಕ್ಷೆಯ ಮೇಲ್ವಿಚಾರಣೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರು ಮತ್ತು ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಆದೇಶದಲ್ಲಿ ಈ ಸಮೀಕ್ಷಾ ಕಾರ್ಯನಿರ್ವಹಣೆಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಿದ್ದು, ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಎಸ್.ದೀಪಕ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಸೆಸ್ಕ್ ಇಇ ರಾಮಚಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ಅಧಿಕಾರಿ ಕವಿತಾ, ವ್ಯವಸ್ಥಾಪಕರಾದ ಶಿವಶಂಕರ, ತಾಲ್ಲೂಕು ಅಧಿಕಾರಿಗಳಾದ ಮೋಹನ್ ಕುಮಾರ್, ಶ್ರೀಕಾಂತ್, ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನಾರಾಯಣ ಇತರರು ಇದ್ದರು.