ಪರಿಸರ ಸಂರಕ್ಷಣೆ ಹೊಣೆಗಾರಿಕೆ ಎಲ್ಲರದು

mkg1
Published on

ಚನ್ನಗಿರಿ: ಪರಿಸರ ಎಲ್ಲರಿಗೂ ಸಂಬಂಧಿಸಿದ ಬಹುದೊಡ್ಡ ಆಸ್ತಿ. ಅದನ್ನು ನಾಶ ಮಾಡುವ ಹಕ್ಕು ಯಾರಿಗೂ ಇಲ್ಲ. ಆದರೆ, ಪರಿಸರ ಸಂರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿತ್ರದುರ್ಗ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ತಿಳಿಸಿದರು.

ಸಂತೇಬೆನ್ನೂರು ಹೋಬಳಿ ದೊಡ್ಡಬ್ಬಿಗೆರೆ ಗ್ರಾಮದ ಕಲ್ಲೇಶ್ವರ ಸಮುದಾಯ ಭವನದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧ್ದಿ ಸಂಸ್ಥೆ ಬಿಸಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಾಮಾಜಿಕ ಅರಣ್ಣೀಕರಣ ಕಾರ್ಯಕ್ರಮ ಉದ್ದೇಶಿಸಿ ಶನಿವಾರ ಮಾತನಾಡಿದರು.

ಅರಣ್ಯ ಕಡಿದು ಖಾಲಿ ಮಾಡುತ್ತಿರುವ ಕಾರಣದಿಂದ ಕಾಡುಪ್ರಾಣಿಗಳು ಅಹಾರ ಹುಡುಕಿ ನಾಡಿಗೆೆ ಬಂದು ಮನುಷ್ಯರಿಗೆ ತೊಂದರೆ ನೀಡುತ್ತಿವೆ ಜತೆಗೆ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ಮರ ಕಡಿಯುವ ಮೊದಲು ಒಂದು ಸಸಿ ಬೆಳೆಸಿ ನಂತರ ಕಡಿಯಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಕಾಡುಗಳನ್ನು ಪುಸ್ತಕಗಳಲ್ಲಿ ತೋರಿಸುವ ಸ್ಥಿತಿ ಬರಲಿದೆ ಎಂದು ಹೇಳಿದರು.

ದೊಡ್ಡಬ್ಬಿಗೆರೆ ಗ್ರಾಮದಲ್ಲಿ 3500 ಸಸಿಗಳನ್ನು ನೆಡಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 10 ಸಾವಿರ ಸಸಿ ನೆಡುವ ಯೋಜನೆ ಮಾಡಲಾಗಿದೆ. ಪ್ರತಿಯೊಬ್ಬರು ತಮ್ಮ ಮನೆ ಮುಂದೆ ಒಂದು ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕೆಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ಅಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ಮಾತನಾಡಿ, ಶಾಲೆ ಕಾಲೇಜು, ಮಠ, ಮಂದಿರ ಹಾಗೂ ರುದ್ರಭೂಮಿಗಳಲ್ಲಿ ಸಸಿ ನೆಡಲು ಯೋಜನೆ ಹಾಕಲಾಗಿದೆ. ಗ್ರಾಮೀಣ ಭಾಗದ ಜನರು ನಾಗರ ವನ, ಚೌಡಿಯ ವನ ಹಾಗೂ ಊರಮ್ಮನ ವನ ಎಂದು ಹಳೆಯ ಕಾಲದಲ್ಲಿ ವನ ಬೆಳೆಸಲು ಮೀಸಲು ಭೂಮಿ ಇಟ್ಟಿದ್ದು ಈಗ ಕೇವಲ ಇತಿಹಾಸವಾಗಿದೆ. ಮತ್ತೆ ಅವುಗಳಿಗೆ ಜೀವ ನೀಡುವಂತ ಕೆಲಸ ಸಸಿ ನೆಡುವ ಮೂಲಕ ಆಗಬೇಕಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಬಿ. ಸವಿತಾ, ಒಕ್ಕೂಟದ ಅಧ್ಯಕ್ಷೆ ರೂಪ, ಮೀನಾಕ್ಷಿ, ಅರಣ್ಯಾಧಿಕಾರಿ ಕೃಷ್ಣಮೂರ್ತಿ, ಗ್ರಾಪಂ ಸದಸ್ಯ ಯತೀಶ್, ಸಂತೇಬೆನ್ನೂರು ಯೋಜನಾಧಿಕಾರಿ ರವಿಚಂದ್ರ, ರಾಜೇಂದ್ರ, ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net