ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ: ಸಾಮಾಜಿಕ ಕಾರ್ಯಕರ್ತ ವೈ.ಸಿ.ಮಧು ಆರೋಪ

Social activist press conference Mandya
Published on

ಮಂಡ್ಯ: ಜಿಲ್ಲೆಯಲ್ಲಿ 2021-22ನೇ ಸಾಲಿನ ಸಿಎಸ್‌ಆರ್ ಅನುದಾನದಡಿ ಮಾಡಿರುವ ಆರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ವರ್ಕ್‌ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್ ಕಟ್ಟಡಗಳ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಈ ಸಂಬಂಧ ತನಿಖೆಗೆ ಒತ್ತಾಯಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ಎಂದು ಸಾಮಾಜಿಕ ಕಾರ್ಯಕರ್ತ ವೈ.ಸಿ.ಮಧು ತಿಳಿಸಿದರು.

ನಿರ್ಮಿತಿ ಕೇಂದ್ರ ಮತ್ತು ನೆಸ್ಟ್ ಇನ್ ಟಾಟಾ ಸ್ಟೀಲ್ ಲಿಮಿಟೆಡ್ ಖಾಸಗಿ ಕಂಪನಿ ನಡುವೆ ಅನ್‌ಸೈನ್ಡ್ ಡಾಕ್ಯುಮೆಂಟ್ ಒಪ್ಪಂದ ಆಧಾರದಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ. ನಕಲಿ ಬಿಲ್ ಸೃಷ್ಟಿಸಿ ಹಣ ಡ್ರಾ ಮಾಡಲು ಮುಖ್ಯಮಂತ್ರಿ ಸಚಿವಾಲಯದ ಪ್ರಭಾವ ಬಳಸಿ ಹಣ ದುರ್ಬಳಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಾಮಗಾರಿಗೆ ಸಂಬಂಧಿಸಿದಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಆದೇಶ, ಸೂಚನೆಗಳ ಮಾಹಿತಿಗಳ ಕಡತದಲ್ಲಿಲ್ಲದಿದ್ದರೂ ಹಣ ಸಂದಾಯ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರವೇ ಸಿಗದಂತಾಗಿದೆ. ಇದನ್ನು ಗಮನಿಸಿದಾಗ ಹಣ ದುರ್ಬಳಕೆಯಾಗಿರುವ ಶಂಕೆ ಮೂಡುತ್ತಿದೆ. ಕಾಲೇಜುಗಳ ಅಂದಾಜು ಪಟ್ಟಿಯನ್ನು ಒಂದೊಂದು ಕಡೆ ಒಂದೊಂದು ರೀತಿ ತೋರಿಸಿದ್ದಾರೆ. ಎಲೆಕ್ಟ್ರಾನಿಕ್ ಮೆಜರ್‌ಮೆಂಟ್ ಬುಕ್‌ಗೂ ಮತ್ತು ಅಂದಾಜುಪಟ್ಟಿಗೂ ತಾಳೆ ಇರುವುದಿಲ್ಲ. ಕಾಮಗಾರಿಯ ತಪಾಸಣಾ ವರದಿಯಲ್ಲಿ ಕಂಡುಬಂದ ನ್ಯೂನತೆಗಳನ್ನು ಸರಿಪಡಿಸಿ ಕಾಮಗಾರಿಯನ್ನು ಪೂಣಣೊಳಿಸಿಲ್ಲ. ಮೂರನೇ ವ್ಯಕ್ತಿಯ ತಪಾಸಣಾ ವರದಿ, ಕಾಮಗಾರಿ ಪೂರ್ಣಗೊಂಡ ಬಗ್ಗೆ ವರದಿ ಪಡೆಯದೆ ಅಂತಿಮಬಿಲ್‌ಗಳನ್ನು ಪಾವತಿಸಲಾಗಿದೆ ಎಂದು ದೂರಿದರು.

ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ 15 ವರ್ಷದಿಂದ ನಡೆದಿರುವ ಹಗರಣವನ್ನು ಕರ್ನಾಟಕ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಅಥವಾ ಸಿಬಿಐನಿಂದ ತನಿಖೆ ನಡೆಸಬೇಕು. ಇನ್ನು ಅವ್ಯವಹಾರಗಳ ತನಿಖೆ ನಡೆಸುವಂತೆ ಮನವಿ ಸಲ್ಲಿಸಿರುವ ಬಗ್ಗೆ ತಿಳಿಸಿದ್ದರೂ ಯಾವುದಕ್ಕೂ ಪ್ರತಿಕ್ರಿಯಿಸದೆ ಜಿಲ್ಲಾಧಿಕಾರಿ ಮೌನವಹಿಸಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net