

| ಪಂಕಜ ಕೆ.ಎಂ. ಬೆಂಗಳೂರು
ತೆರೆದ ಮೋರಿ, ಒಳಚರಂಡಿ ಪೈಪುಗಳು ಒಡೆದು ದುರ್ವಾಸನೆ, ಡಾಂಬರ್ ಕಾಣದ ಧೂಳುಮಯ ರಸ್ತೆ, ವಾಹನಗಳ ಪ್ರವೇಶವಿಲ್ಲದೆ ಆಸ್ಪತ್ರೆ ಗೇಟಿನಿಂದಲೇ ನಡೆದುಕೊಂಡು ಬರುವ ಅನಿವಾರ್ಯತೆ, ಅವ್ಯವಸ್ಥೆಯಿಂದ ಕೂಡಿರುವ ಆವರಣದಲ್ಲಿ ಕಾಯುವ ಸ್ಥಿತಿ... ಇದು ವಿಕ್ಟೋರಿಯಾ ಆಸ್ಪತ್ರೆಯ ಸದ್ಯದ ದುಸ್ಥಿತಿ!
ಈ ಹಿಂದೆಯೂ ಆಸ್ಪತ್ರೆಯಲ್ಲಿ ಇಂತಹ ಸಮಸ್ಯೆಗಳಿದ್ದವು. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ. ಆಗಾಗ್ಗೆ ಸಂಭವಿಸುತ್ತಿದ್ದ ಸಣ್ಣಪುಟ್ಟ ಸಮಸ್ಯೆಗಳನ್ನು ತಕ್ಷಣ ಪರಿಹರಿ ಸಲಾಗುತ್ತಿತ್ತು. ಆದರೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಕೈಗೊಂಡಿರುವ ಕಾಮಗಾರಿ ಹಿನ್ನೆಲೆಯಲ್ಲಿ ಅಧ್ವಾನದ ಸ್ಥಿತಿ ನಿರ್ವಣವಾಗಿದೆ. ಕಾಮಗಾರಿ ಪ್ರಾರಂಭವಾಗಿ ಎರಡು ತಿಂಗಳು ಕಳೆದಿದೆ. ಲಾಕ್ಡೌನ್ ವೇಳೆ ಆಸ್ಪತ್ರೆಗೆ ಕೇವಲ ಕೋವಿಡ್ ರೋಗಿಗಳು ಮಾತ್ರವೇ ದಾಖಲಾಗುತ್ತಿದ್ದರಿಂದ ಅಂತಹ ಸಮಸ್ಯೆ ಇರಲಿಲ್ಲ. ಇದೀಗ ಕೋವಿಡ್ರಹಿತ ಚಿಕಿತ್ಸೆಗಳು ಪ್ರಾರಂಭವಾಗಿವೆ. ಜತೆಗೆ ಕೋವಿಡ್ ಲಸಿಕೆಯನ್ನೂ ಇದೇ ಆಸ್ಪತ್ರೆ ಆವರಣದಲ್ಲಿ ನೀಡಲಾಗುತ್ತಿರುವುದರಿಂದ ನಿತ್ಯ ನೂರಾರು ಮಂದಿ ಆಗಮಿಸುತ್ತಾರೆ. ಇದರಿಂದ ಆಸ್ಪತ್ರೆ ಆವರಣದಲ್ಲಿ ರೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರು, ಲಸಿಕೆ ಪಡೆಯಲು ಬರುವವರು ಕೂರಲೂ ಜಾಗವಿಲ್ಲದೆ ಪರದಾಡುವಂತಾಗಿದೆ.
ಆಸ್ಪತ್ರೆ ಆವರಣದ ಒಳಗೂ ಧೂಳು, ವಾಹನಗಳ ದಟ್ಟಣೆಯಿಂದ ಹೊರಗೂ ಧೂಳು. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗೂ ವಾಹನ ನಿಲ್ಲಿಸಲು ಸ್ಥಳವಿಲ್ಲ. ಹೀಗಿರುವಾಗ ರೋಗಿಗಳ ಸ್ಥಿತಿ ಕೇಳಬೇಕೆ? ಅಂಬುಲೆನ್ಸ್ಗಳಿಗೆ ಮಾತ್ರ ಪ್ರವೇಶ ಅವಕಾಶವಿದೆ. ಉಳಿದಂತೆ ಅಟೋ ಮತ್ತು ಟ್ಯಾಕ್ಸಿಗಳಲ್ಲಿ ಬರುವ ರೋಗಿಗಳು ಗೇಟ್ನಲ್ಲೇ ಇಳಿದು, ನಡೆದುಕೊಂಡು ಹೋಗುವ ಸ್ಥಿತಿಯಿದೆ. ಕೋವಿಡ್ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಒಳಗೆ ರೋಗಿಗಳ ಕುಟುಂಬದ ಸದಸ್ಯರಿಗೂ ಪ್ರವೇಶವಿಲ್ಲ. ಹೀಗಾಗಿ ರೋಗಿ ಚಿಕಿತ್ಸೆ ಪಡೆದು ಹೊರಬರುವವರೆಗೂ ಹೊರಗೆ ನಿಂತು ಕಾಯಬೇಕಿದೆ. ಒಳಚರಂಡಿ ಪೈಪುಗಳು ಒಡೆದಿರುವುದರಿಂದ ದುರ್ವಾಸನೆ ನಡುವೆ ಊಟ ಮಾಡಲು ಸಾಧ್ಯ ವಾಗುತ್ತಿಲ್ಲ. ಇದು ಕೇವಲ ರೋಗಿಗಳು ಹಾಗೂ ಕುಟುಂಬದ ಸದಸ್ಯರಿಗೆ ಮಾತ್ರವಲ್ಲ. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗೂ ಇದೇ ಸಮಸ್ಯೆ.
ಕಾಮಗಾರಿಯನ್ನು ಒಂದು ಕಡೆಯಿಂದ ಮಾಡಿಕೊಂಡು ಹೋಗುತ್ತಿಲ್ಲ. ಬದಲಿಗೆ ಎಲ್ಲ್ಲ ಕಡೆ ಅಗೆಯಲಾಗಿದೆ. ಇದರಿಂದ ರೋಗಿಗಳನ್ನು ನೋಡಲು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹೋಗುವಾಗ ವೈದ್ಯರಿಗೂ ಸಮಸ್ಯೆಯಾಗುತ್ತಿದೆ. ಕಾಮಗಾರಿ ಯಾವಾಗ ಮುಗಿಯುತ್ತದೆ ಎಂದು ತಿಳಿದಿಲ್ಲ. ಅಲ್ಲಿಯವರೆಗೂ ಇದನ್ನೆಲ್ಲ ಸಹಿಸಿಕೊಂಡು ಚಿಕಿತ್ಸೆ ನೀಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.